

ನಂಜನಗೂಡು: ಸ್ತಬ್ಧವಾಗಿದ್ದ ನಂಜನಗೂಡನ್ನು ಸಹಜ ಸ್ಥಿತಿಗೆ ತರುವ ಹಿಂದೆ ನೂರಾರು ಕರೊನಾ ಸೇನಾನಿಗಳ ಶ್ರಮ ಹಾಗೂ ತ್ಯಾಗ ಅಡಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕರೊನಾ ಸೇನಾನಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾ.26ರಂದು ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯ ನೌಕರನಿಗೆ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಭಯದ ವಾತಾವರಣ ಸೃಷ್ಟಿಯಾಯಿತು. ಬಳಿಕ ಸೋಂಕಿತರು ಹೆಚ್ಚಾದಂತೆ ನಂಜನಗೂಡು ಸಂಪೂರ್ಣ ಸ್ತಬ್ಧಗೊಂಡು ಜನರಲ್ಲಿ ಆತಂಕ ಮನೆಮಾಡಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು ಎಂದರು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಪ್ರತಿಕೂಲ ಪರಿಣಾಮ ಉಂಟಾಗದಂತೆ ಜಿಲ್ಲಾಡಳಿತ ಕೈಗೊಂಡ ನಿರ್ಧಾರಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಅನುಷ್ಠಾನಗೊಳಿಸುವ ಮೂಲಕ ಕರೊನಾ ನಿಯಂತ್ರಿಸುವಲ್ಲಿ ಸಫಲರಾದರು. ಜೀವದ ಹಂಗು ತೊರೆದು ಕಂಟೇನ್ಮೆಂಟ್ ವಲಯಗಳಲ್ಲಿ ಕಸ ವಿಲೇವಾರಿ, ಜ್ವರ ಪೀಡಿತರ ಸರ್ವೇ ನಡೆಸಿದ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರ ಶ್ರಮ ಶ್ಲಾಘನೀಯ.
ಅಂತೆಯೇ ಆರೋಗ್ಯ, ಕಂದಾಯ, ಪೊಲೀಸ್ ಅಧಿಕಾರಿಗಳ ಸಮನ್ವಯತೆಯಿಂದ ಕರೊನಾ ತುರ್ತು ಪರಿಸ್ಥಿತಿ ವಿಷಮ ಸ್ಥಿತಿಗೆ ಸಿಲುಕದಂತೆ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಶ್ರೀಕಂಠೇಶ್ವರಸ್ವಾಮಿ ಹಾಗೂ ಚಾಮುಂಡೇಶ್ವರಿ ಆಶೀರ್ವಾದ ಫಲವಾಗಿ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ನಂಜನಗೂಡಿನಲ್ಲಿ ಏಪ್ರಿಲ್, ಮೇನಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣಗೊಂಡಿತ್ತು. ನಗರ ಪ್ರದೇಶ ಸೇರಿ ಕೆಲ ಹಳ್ಳಿಗಳಿಗೂ ಕರೊನಾ ವ್ಯಾಪಿಸಿತ್ತು. ಅಂತಹ ಪರಿಸ್ಥಿತಿ ವೇಳೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಸಾರ್ವಜನಿಕರು ಶಿಸ್ತು, ಸಂಯಮದಿಂದ ಪಾಲಿಸಿದಕ್ಕೆ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳ ಸಾಥ್ ಮರೆಯುವಾಗಿಲ್ಲ. ಕಂಟೇನ್ಮೆಂಟ್ ವಲಯಗಳಲ್ಲಿ ಕೆಲಸ ಮಾಡಿದ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರು ಸೇರಿ ತಾಲೂಕು ಮಟ್ಟದ ಆರೋಗ್ಯ, ಕಂದಾಯ, ಪೊಲೀಸ್, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇದರ ಶ್ರೇಯಸ್ಸು ಸಲ್ಲಸಬೇಕು. ಪ್ರತಿಯೊಬ್ಬರು ಅಭಿನಂದನಾರ್ಹರು. ಕಳೆದ ವರ್ಷ ನಂಜನಗೂಡಿನಲ್ಲಿ ಕಪಿಲಾ ನದಿ ಪ್ರವಾಹ, ಈ ವರ್ಷ ಕರೊನಾದಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಇಂತಹ ಪ್ರಮುಖ ಘಟ್ಟಗಳನ್ನು ದಾಟಿರುವ ನಮಗೆ ಎಚ್ಚರಿಕೆಯೂ ಇರಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಜಿಪಂ ಸಿಇಒ ಪ್ರಶಾಂತ್ ಮಿಶ್ರಾ, ಎಸ್ಪಿ ರಿಷ್ಯಂತ್, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಜಿಪಂ ಸದಸ್ಯರಾದ ಮಧು ಸುಬ್ಬಣ್ಣ, ಮಂಗಳಾ ಸೋಮಶೇಖರ್, ಎಚ್.ಎಸ್.ದಯಾನಂದಮೂರ್ತಿ, ಬಿ.ಎನ್.ಸದಾನಂದ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಂ.ಕೆಂಪಣ್ಣ, ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ತಾಪಂ ಇಒ ಶ್ರೀಕಂಠರಾಜೆ ಅರಸ್, ತಾಪಂ ಸದಸ್ಯರಾದ ಸಿ.ಎಂ.ಮಹದೇವಯ್ಯ, ಬಿ.ಎಂ.ರಾಮು, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ ಇತರರಿದ್ದರು.
ಕರೊನಾ ಸೇನಾನಿಗಳಿಗೆ ಹೂಮಳೆ: ನಂಜನಗೂಡಿನಲ್ಲಿ ಕರೊನಾ ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಶ್ರಮಿಸಿದ ಪೌರಕಾರ್ಮಿಕರು, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಿದರು.
ಇದೇ ವೇಳೆ 100 ಆಶಾ ಕಾರ್ಯಕರ್ತರಿಗೆ ಸಹಾಯಧನ ಚೆಕ್ ಹಾಗೂ ದಿನಸಿ ಕಿಟ್ ವಿತರಿಸಲಾಯಿತು. ಶಾಸಕ ಬಿ.ಹರ್ಷವರ್ಧನ್ ತಾಲೂಕಿನ ಜನತೆಯ ಪರವಾಗಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸ್ಪಿ ರಿಷ್ಯಂತ್, ಜಿಪಂ ಸಿಇಒ ಪ್ರಶಾಂತ್ ಮಿಶ್ರಾ ಅವರನ್ನು ಸನ್ಮಾನಿಸಿದರು.
ಸಚಿವರಿಂದ ದರ್ಶನ: ಲಾಕ್‌ಡೌನ್ ನಡುವೆಯೂ ಎರಡು ಬಾರಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ದೇವಾಲಯ ತೆರೆದ ಮೊದಲ ದಿನವಾದ ಸೋಮವಾರವೂ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.