ಅಜ್ಞಾನದಿಂದ ಜ್ಞಾನದತ್ತ

photo (8)
Published on
ಕನ್ನಡದ ಹಿರಿಯ ಕವಿ ಸೋಮೇಶ್ವರ ತನ್ನ ಶತಕದಲ್ಲಿ ಹೀಗೆಂದಿದ್ದಾನೆ: ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ | - ಹೇಗೆ ಅನೇಕ ಹಳ್ಳಗಳು ಸೇರಿ ಒಂದು ಸಮುದ್ರವಾಗುತ್ತದೋ ಹಾಗೆಯೇ ಜ್ಞಾನಿಯ ಜ್ಞಾನವು.

ಶಾಸ್ತ್ರಗಳ ಅಧ್ಯಯನದಿಂದ, ಕೆಲವರು ಜೀವನ ಮಾಡುವ ಶೈಲಿಯನ್ನು ಕಂಡು, ಸ್ವತಃ ತನ್ನ ಬುದ್ಧಿಯ ಕಸರತ್ತಿನಿಂದ, ಸಜ್ಜನರ ಸಂಘ ಹಾಗೂ ಸಹವಾಸದಿಂದ ಜ್ಞಾನಿ ತನ್ನ ಜ್ಞಾನವನ್ನು ವೃದ್ಧಿ ಮಾಡಿಕೊಂಡಿರುತ್ತಾನೆ. ಆತ ಎಂದೂ ಸಹ ಈ ಜ್ಞಾನ ನನ್ನದು, ನಾನು ಜ್ಞಾನಿ ಎಂದು ಹೇಳುವುದಿಲ್ಲ. ನಾವು ಕಲಿಯಲು ಸಿದ್ಧರಾಗಿದ್ದರೆ, ಯಾವುದರಿಂದಲಾದರೂ ಯಾರಿಂದಲಾದರೂ ಕಲಿಯ ಬಹುದು.

ಜ್ಞಾನ ಹೇಗೆ ನಮ್ಮ ದುಃಖವನ್ನು ಕಡಿಮೆ ಮಾಡುತ್ತದೆ? ಈ ವಿಚಾರವನ್ನು ಕುರಿತು ಚಿಂತಿಸೋಣ, ಅಹಂಕಾರವೆಂದರೆ ತಾನೇ ಶ್ರೇಷ್ಠ ಎನ್ನುವುದು. ನಾವಿರುವ ಪರಿಸರದಲ್ಲಿ ನಾವೇ ಹಣವಂತರಿ ರಬಹುದು. ಜ್ಞಾನಿಗಳಿರಬಹುದು ಅಥವಾ ಇನ್ನೂ ಯಾವುದೇ ರೀತಿಯಲ್ಲಿ ನಮ್ಮನ್ನು ನಾವು ಶ್ರೇಷ್ಠರೆಂದು ಭಾವಿಸಬಹುದು. ಆದರೆ ಸತ್ಯ ನಾವು ಇರುವಷ್ಟೇ ಅಲ್ಲ, ಕಂಡಷ್ಟೇ ಅಲ್ಲ. ಪಂಚತಂತ್ರದಲ್ಲಿ ಬಾವಿ ಕಪ್ಪೆ ಹಾಗೂ ಸಮುದ್ರದ ಕಪ್ಪೆಯ ಉದಾಹರಣೆ ಈ ವಿಚಾರಕ್ಕೆ ಸಮಂಜಸವಾಗುತ್ತದೆ.

ಬಾವಿಯಲ್ಲಿ ವಾಸಿಸುತ್ತಿದ್ದ ಕಪ್ಪೆಗೆ ಜಗತ್ತೆಂದರೆ ಇಷ್ಟೆಯೆಂಬ ಜ್ಞಾನ. ಅದರ ಜೀವನವು ಅಲ್ಲಿಂದಲೇ ಪ್ರಾರಂಭವಾಗಿ ಅಲ್ಲೇ ಕೊನೆಗೊಳ್ಳುವುದರಿಂದ ಇದು ಸಹಜವೇ. ಒಮ್ಮೆ ಅಲ್ಲಿಗೆ ಬಂದ ಸಮುದ್ರದ ಕಪ್ಪೆಗೆ ಸಮುದ್ರ ಹೇಗಿದೆ ಎಂದು ವಿವರಿಸಲು ಅಸಾಧ್ಯವಾಯಿತು. ಕಾರಣ ಬಾವಿಯ ಕಪ್ಪೆಗೆ ದೊಡ್ಡದು ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿತ್ತು.

ನಮ್ಮ ಸ್ಥಿತಿಯೂ ಬಾವಿಯ ಕಪ್ಪೆಯಂತೆಯೇ. ಬಾವಿಯಿಂದ ಹೊರಬಂದಾಗ ಮಾತ್ರ ನಮ್ಮ ಅಜ್ಞಾನದ ಅರಿವು ನಮಗಾಗುತ್ತದೆ. ಮನಸ್ಸು ವಿಶಾಲವಾದಷ್ಟೂ ಜ್ಞಾನ ಹೆಚ್ಚಾಗುತ್ತದೆ. ನಾವಿರುವ ಸ್ಥಳವನ್ನು ಪ್ರೀತಿಸುವ ಹಾಗೆಯೇ ಇತರರದೂ ಉತ್ತಮವೆಂದು ಅರಿಯೋಣ. ನಮ್ಮ ದುಃಖಕ್ಕೆ ನಮ್ಮ ಅಜ್ಞಾನವೇ ಕಾರಣ. ಅಜ್ಞಾನದಿಂದ ಜ್ಞಾನದತ್ತ ನಮ್ಮ ಪ್ರಯಾಣ ಸಾಗಬೇಕು. ಇದರ ಅರಿವೇ ದೊಡ್ಡ ಸಾಧನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net