ಹೀರೋಪುಕ್​ನಿಂದ ಬಿಎಂಡಬ್ಲ್ಯೂವರೆಗೆ

11-680d199bf4207
Published on
ಸ್ಪೂರ್ತಿ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ. ಹಿಂದೆ ನಮ್ಮ ಸುತ್ತ ಮುತ್ತ ಇರುವ ಸಾಧಕರನ್ನು ನೋಡಿ ಅವರನ್ನೇ ನಮ್ಮ ಆದರ್ಶ ಎಂದು ಭಾವಿಸುವ ಕಾಲವಿತ್ತು. ನನ್ನ ಜೀವನದಲ್ಲಿ - ನನ್ನ ತಂದೆ ಪಂಡಿತ್ ವೆಂಕಟೇಶ ಗೋಡ್ಖಿಂಡಿ ಆಗಿರಬಹುದು, ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅಥವಾ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಆಗಿರಬಹುದು- ಅವರ ಜತೆಗಿದ್ದಾಗಲೇ ನಾವು ಅವರ ಹಾಗೆ ಆಗಬೇಕು ಎಂದು ಸ್ಪೂರ್ತಿ ಪಡೆಯುತ್ತಿದ್ದೆ.

ಬಾಲ್ಯದಿಂದಲೂ ನಾನು ಉಸ್ತಾದ್ ಝಾಕಿರ್ ಹುಸೇನ್ ಅವರ ಅಭಿಮಾನಿ. ಕಾಲಕ್ರಮೇಣ ಅವರ ಜೊತೆಗೇ ಒಂದು ಕಾರ್ಯಕ್ರಮ ನೀಡುವ ಸೌಭಾಗ್ಯ ನನ್ನದಾಯಿತು. ಅದೇ ರೀತಿ ಗುರುಗಳಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ವ. ಅವರೊಂದಿಗೆ ಎಷ್ಟೋ ಕಾರ್ಯಕ್ರಮಗಳನ್ನು ಈಗಲೂ ನೀಡುತ್ತಿದ್ದೇನೆ. ಅವರು ಸದಾ ನನಗೆ ಸ್ಪೂರ್ತಿ. ನನ್ನ ತಂದೆಯವರ ಹಾಗೆ ಅಷ್ಟೊಂದು ಸಂಗೀತ ಸಂಪತ್ತನ್ನು ತಲೆಯಲ್ಲಿ ತುಂಬಿಕೊಳ್ಳುವುದು ಹೇಗೆ? - ಎಂದೆಲ್ಲ ಯೋಚಿಸುತ್ತಿದ್ದೆ. ಅವರನ್ನೇ ಮಾರ್ಗದರ್ಶಕರಾಗಿ ಕಂಡುಕೊಂಡು ಅನುಕರಿಸುತ್ತಿದ್ದೆವು, ಅನುಸರಿಸುತ್ತಿದ್ದೆವು. ಈಗಿನವರಲ್ಲಿ ಆ ರೀತಿಯ ಕಲಿಕೆ ಕಮ್ಮಿ ಆಗಿದೆೆ. ನಮಗೆ ಅತ್ಯಂತ ಸುಲಭವಾಗಿ ಸಿಗುವ ಸಾಧಕರು, ಪಕ್ಕದ ಮನೆಯಲ್ಲೇ ಇದ್ದರೂ ಈಗಿನ ಪೀಳಿಗೆಗೆ ಅದು ಹೆಮ್ಮೆ ಅನಿಸುವುದಿಲ್ಲ. ಇದು ಬದಲಾಗಬೇಕು. ಅಂಥವರನ್ನು ಶ್ಲಾಘಿಸಿ, ಅವರಿಂದ ಸ್ಪೂರ್ತಿ ಪಡೆದು ನಾವೂ ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗಬೇಕು.

***

ರಾಕೆಟ್ ಲಾಂಚರ್ ಇದ್ದಂಗಿದೆ!: ಅದು ನಾನು ಬೆಂಗಳೂರಿಗೆ ಬಂದ ಹೊಸತು. ಬಸ್ಸಿನಲ್ಲೇ ಓಡಾಡುತ್ತಿದ್ದೆ. ಆಗ ನನಗೆ ಆಟೋದಲ್ಲಿ ಹೋಗುವುದು ಕೂಡ ದುಬಾರಿ ಅನಿಸುತ್ತಿತ್ತು. ಆದರೆ ಕೊಳಲಿನ ಬ್ಯಾಗು, ಅದರ ದೊಡ್ಡದೊಂದು ಪೆಟ್ಟಿಗೆ ಹೆಗಲಿಗೆ ಹಾಕಿಕೊಂಡು ಬಸ್ ಹತ್ತಿದ ತಕ್ಷಣ ಕಂಡಕ್ಟರ್ ‘ಏನ್ರೀ ಇದು ರಾಕೆಟ್ ಲಾಂಚರ್ ಥರ ಇದೆ’ ಎಂದು ಕೇಳುತ್ತಿದ್ದರು. ಅವರಿಗೆ ‘ಇಲ್ಲಾರಿ ಇದು ಕೊಳಲು’ ಅಂದರೆ, ‘ಕೊಳಲು ಅಷ್ಟು ದೊಡ್ಡ, ಅಷ್ಟು ಉದ್ದ ಇರುತ್ತೇನ್ರಿ, ನಮಗೇ ಹೇಳತೀರಾ ನೀವು?’ ಅಂತೆಲ್ಲ ಅನುಮಾನಿಸುತ್ತಿದ್ದರು. ಆಗ ನನಗೆ ಬೆಂಗಳೂರು ಕಡೆಯ ಭಾಷೆ ಬೇರೆ ಸರಿಯಾಗಿ ಬರುತ್ತಿರಲಿಲ್ಲ. ಇನ್ನೊಮ್ಮೆ ಅಂತೂ ಬಸ್ಸಿಂದ ನನ್ನನ್ನು ಇಳಿಸಿಯೇಬಿಟ್ಟರು. ಅದು ಅಲ್ಲಲ್ಲಿ ಏನೇನೋ ಗಲಾಟೆಗಳು ನಡೆಯುತ್ತಿದ್ದ ಕಾಲವಾಗಿತ್ತು. ಹೀಗಾಗಿ ರಿಸ್ಕೇ ಬೇಡ ಎಂದು ಅವರು ಈ ಕೆಲಸ ಮಾಡಿದರು.

ಕೆಲವು ಸಾರ್ವಜನಿಕರು ಕೂಡ ‘ನೀವು ಆಟೋದಲ್ಲಿ ಹೋಗ್ರಿ’ ಎಂದು ದನಿಗೂಡಿಸಿದರು. ದಿನವಿಡೀ ರೆಕಾರ್ಡಿಂಗ್ ಮುಗಿಸಿ ದಣಿದು ವಾಪಸ್ ಬರುತ್ತಿರುವಾಗ ಕೊಳಲು ಇಷ್ಟು ಉದ್ದ ಇರುತ್ತೆ, ಅದೊಂದು ವಾದ್ಯ, ಅದು ಮಾರಕಾಸ್ತ್ರ ಅಲ್ಲ ಎಂದು ತೋರಿಸಿ ವಿವರಿಸುವಷ್ಟು ತಾಳ್ಮೆ ನನಗೂ ಇರಲಿಲ್ಲ. ಈ ರೀತಿಯ ಅಪಮಾನಗಳೂ ಆ ದಿನಗಳಲ್ಲಿ ಆಗಿದ್ದುಂಟು. ಆದರೆ ಅದನ್ನು ನಾನು ತಮಾಷೆಯಾಗಿ ಎಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೆ. ನನ್ನ ಹ್ಯಾಂಡ್ ಬ್ಯಾಗೇಜಿನಲ್ಲಿ ಕೊಳಲು ಒಯ್ಯವಾಗ ಇವತ್ತಿಗೂ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ‘ಕ್ಯಾ ಹೈ ಇಸ್ ಮೇ’ ಅನ್ನುತ್ತಾರೆ. ಅದು ಬಾನ್ಸುರಿ ಅಂದರೆ ನಂಬುವುದಿಲ್ಲ. ಅವರಿಗೆಲ್ಲ ಕೊಳಲು ಅಂದರೆ ಇರುವ ಕಲ್ಪನೆ ಒಂದೇ - ಚಿತ್ರಪಟಗಳಲ್ಲಿ ಕೃಷ್ಣನ ಕೈಯಲ್ಲಿ ಅಥವಾ ಜಾತೆ್ರಗಳಲ್ಲಿ ನೋಡಿರುವ ಚಿಕ್ಕ ಕೊಳಲು ಅಷ್ಟೇ. ಆದ್ದರಿಂದಲೇ ‘ಇದು ದೊಣ್ಣೆ ಅಲ್ಲವಾ, ಇದರಿಂದ ಹೊಡೆದರೆ ಮನುಷ್ಯ ಸಾಯಬಹುದಲ್ಲವಾ’ ಎಂದೆಲ್ಲ ಕೇಳುತ್ತಾರೆ. ಅದರಿಂದ ಮನಸಿಗೆ ತುಂಬಾ ನೋವಾಗುತ್ತದೆ. ಕೊಳಲು ಎಷ್ಟು ಸೂಕ್ಷ್ಮ ಅಂದರೆ ಕೈ ಪ್ರೆಶರ್ ಜಾಸ್ತಿ ಆದರೂ ಒಡೆದು ಹೋಗುತ್ತದೆ. ಹೀಗಿರುವಾಗ ‘ಇದರಿಂದ ನೀವು ಬೇರೆಯವರನ್ನು ಮರ್ಡರ್ ಮಾಡಬಹುದಾ’ ಎಂದೆಲ್ಲ ಪ್ರಶ್ನೆ ಮಾಡುತ್ತಾರಲ್ಲ ಎಂದು ಬೇಜಾರಾಗುತ್ತದೆ.

ಆದರೆ ಇದೂ ಒಂದು ರೀತಿಯ ಕಲಿಕೆಯೇ. ಜನಸಾಮಾನ್ಯರಿಗೆ ಸಂಗೀತದ ಅರಿವು ಮೂಡಿಸುವುದರ ಬಗ್ಗೆ ನನಗೆ ಇವರೆಲ್ಲರೂ ಸ್ಪೂರ್ತಿ. ಹಾಗಾಗಿಯೇ ನಾನು, ಜನಸಾಮಾನ್ಯರಿಗೆ ಕೊಳಲಿನ ಬಗ್ಗೆ, ಸಂಗೀತದ ಬಗ್ಗೆ, ನಮ್ಮ ಪರಂಪರೆಯ ಬಗ್ಗೆ ತಿಳಿಯಲಿ ಎಂದು ಫ್ಯೂಷನ್ ಮಾಡಿದೆ. ಈ ದಾರಿಯಲ್ಲಿ ನಾನು ಅನೇಕ ವಿಷಯಗಳನ್ನು ಕಲಿತೆ. ಉದಾಹರಣೆಗೆ: ನನ್ನ ಮೊಟ್ಟ ಮೊದಲ ದ್ವಿಚಕ್ರವಾಹನ ಹಿರೊ ಪುಕ್. ಅದೂ ಸೆಕೆಂಡ್ ಹ್ಯಾಂಡ್. ನಮ್ಮ ಮನೆ ಮಾಲೀಕರು, ‘ನೀನು ಬಳಸು’ ಅಂತ ಕೊಟ್ಟಿದ್ದರು. ಅದು ಹೇಗಿತ್ತೆಂದರೆ ಎಲ್ಲೆಂದರಲ್ಲಿ ನಿಂತುಬಿಡುತ್ತಿತ್ತು. ನಂತರ ಅದನ್ನು ಆಟೋದಲ್ಲಿ ಹಾಕಿಕೊಂಡು ನಾನೂ ಕೂತುಕೊಂಡು ರಿಕಾರ್ಡಿಂಗ್ ಮುಗಿಸಿ ವಾಪಸ್ ಮನೆಗೆ ತರುತ್ತಿದ್ದೆ.

ಆ ಹೀರೋಪುಕ್ ನಿಂದ ಆರಂಭವಾದ ನನ್ನ ಪಯಣ ಮೊನ್ನೆ ನಾನು ನನ್ನ ಕನಸಿನ ಬಿಎಂಡಬ್ಲೂ ಕಾರ್ ಖರೀದಿಸಿದ ತನಕ ಸಾಗಿಬಂದಿದೆ. ಇದೊಂದು ಸುದೀರ್ಘ ಸವಿನೆನಪಿನ ಪಯಣ. ಈ ಕಾರನ್ನು ಮನಸ್ಸು ಮಾಡಿದ್ದರೆ ಯಾವಾಗಲೋ ಕೊಳ್ಳಬಹುದಿತ್ತು. ಆದರೆ ಅಷ್ಟು ದೊಡ್ಡ ಮೊತ್ತವನ್ನು ಕಾರಿಗೆ ಹಾಕಿ ಬೇರೆಯದನ್ನು ನಿರ್ಲಕ್ಷ್ಯ ಮಾಡುವುದು ಸರಿಯೇ ಎಂದು ಆಗ ನಾನು ಯೋಚಿಸಿದೆ. ಬೇರೆ ಜವಾಬ್ದಾರಿಗಳ ಕಡೆ ಗಮನ ಕೊಟ್ಟೆ. ಅದೆಲ್ಲ ಆದ ಮೇಲೆ ಈಗ ಈ ಐಷಾರಾಮಿ ಕಾರು ತಗೊಂಡೆ. ಇದೂ ಕೂಡ ಒಂದು ಕಲಿಕೆಯ ಭಾಗವೇ. ಹೇಗೆ?

ಲಗ್ಸುರಿ ಎನ್ನುವುದು, ಇದು ಬೇಕೇ ಬೇಕಾ, ಅನಿವಾರ್ಯವೇ, ಇದಿಲ್ಲ್ಲದ್ದರೂ ಜೀವನ ನಡೆಯುವುದೇ ಎಂದೆಲ್ಲ ಯೋಚನೆ ಮಾಡಿ ಕೊನೆಗೂ ‘ಇರಲಿ’ ಅನಿಸಿದಾಗ ಸರಿ. ಅದು ನಮ್ಮ ಕನಸುಗಳನ್ನು ಈಡೇರಿಸಿಕೊಂಡೆವೆಂಬ ತೃಪ್ತಿಗೋಸ್ಕರ. ಆದರೆ ದುಂದುವೆಚ್ಚ ಆಗಬಾರದು ಎಂಬುದನ್ನು ಯುವಜನ ಅರಿತಿರಬೇಕು.

1998ರಿಂದ ಕೃಷ್ಣ ಫ್ಯೂಷನ್ ಬ್ಯಾಂಡ್ ಹೆಸರಿನ ಒಂದು ತಂಡ ಕಟ್ಟಿಕೊಂಡೆವು. ಬಹುಶಃ ಕ್ಲಾಸಿಕಲ್ ಫ್ಯೂಷನ್ ಬ್ಯಾಂಡ್ ಎಂದು ಹೆಸರು ಮಾಡುತ್ತಿದ್ದುದು ಆ ಸಮಯದಿಂದಲೂ ನನ್ನದೊಂದೇ ಬ್ಯಾಂಡ್. ಎಲ್ಲ ಕಡೆ, ವಿಶೇಷವಾಗಿ ಮಂಗಳೂರು, ಪುತ್ತೂರು ಕಡೆ ನಿಯಮಿತವಾಗಿ ಹೋಗುತ್ತಿದ್ದೆವು. ಏಳು ಜನರ ತಂಡ ನಮ್ಮದು. ಎರಡು ತಬಲಾ, ಒಂದು ಡ್ರಮ್್ಸ, ಎರಡು ಗಿಟಾರ್, ಒಂದು ಕೀಬೋರ್ಡ್... ಕೆಎಸ್​ಆರ್​ಟಿಸಿ ಬಸ್ ನಲ್ಲೇ ಪ್ರಯಾಣ. ಪ್ರಾರಂಭದ ದಿನಗಳಲ್ಲಿ ಆರ್ಡಿನರಿ ಬಸ್​ನಲ್ಲಿ, ನಂತರ ಐರಾವತ ಥರ ಬಸ್​ನಲ್ಲಿ. ಒಂದು ಸೀಟು ಹೆಚ್ಚು ಬುಕ್ ಮಾಡಿರುತ್ತಿದ್ದೆವು. ಅದು ನಮ್ಮ ವಾದ್ಯಗಳಿಗೆ. ಹಾಗೆ ರಿಸರ್ವೆಷನ್ ಮಾಡಿಸಿದ್ದರೂ ಕಂಡಕ್ಟರ್ ಅದನ್ನು ಖಾಲಿ ಬಿಟ್ಟಿದೀರಾ ಅಂತ ಕ್ಯಾತೆ ತೆಗೆಯುತ್ತಿದ್ದ.

ಟಿವಿಯಲ್ಲಿ ನಮ್ಮ ಮುಖಗಳನ್ನು ಬರಲು ಶುರುಮಾಡಿದ ಮೇಲೆ ಆ ಸ್ಥಿತಿ ಬದಲಾಯಿತು. ಹಾಗೇ ನಾವು ಹೋಗಿ ಪ್ರೊಗ್ರಾಂ ಮುಗಿಸಿ ಬಸ್ ಸ್ಟಾಂಡ್​ನಲ್ಲಿ ಸಿಕ್ಕ ಊಟ ಮಾಡಿ ಬಸ್ ಹತ್ತಿ ಬರುತ್ತಿದ್ದೆವು. ಎಷ್ಟೋ ಸಲ ಹಾಗೆ ರಾತ್ರಿಯಿಡೀ ಪ್ರಯಾಣ ಮಾಡಿ ಬಂದವರು ಸೀದಾ ಸ್ಟುಡಿಯೋಕ್ಕೆ ಹೋಗಿ ರಾತ್ರಿ 9 ಗಂಟೆಯವರೆಗೆ ರಿಕಾರ್ಡಿಂಗ್​ನಲ್ಲಿ ತೊಡಗಿಕೊಳ್ಳುತ್ತಿದ್ದೆವು. ಮತ್ತೆ ಇನ್ನೊಂದು ಊರಿನ ಬಸ್ ಏರುತ್ತಿದ್ದೆವು. ಇನ್​ಸ್ಟಾಲ್ ಮೆಂಟ್​ನಲ್ಲಿ ನಿದ್ದೆ ಮಾಡುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಮೊನ್ನೆ ಒಬ್ಬ ಯುವ ಕಲಾವಿದ ಪುಣೆಯಿಂದ ಬೆಂಗಳೂರಿಗೆ ಬರುವಾಗ ‘ಸರ್ ನಾನು ಒಂದಿನ ಮುಂಚೆನೇ ವಿಮಾನದಲ್ಲಿ ಬಂದುಬಿಡುತ್ತೇನೆ. ಬಂದು ನಾನು ರೆಸ್ಟ್ ತಗೋಬೇಕು’ ಎಂದು ಕರೆ ಮಾಡಿದ. ಇಪ್ಪತ್ತರ ಹರೆಯದ ಹುಡುಗ ಅವನು. ಆಗ ನಾವೆಲ್ಲ ಹಿಂದೆ ಇರುತ್ತಿದ್ದ ಆ ದಿನಗಳು ನೆನಪಾದವು.

ನಮಗೆ ಸ್ಪೂರ್ತಿಯಾಗಿದ್ದ ಪಂಡಿತ್ ಭೀಮಸೇನ ಜೋಶಿ ಅಂಥವರು ಹೇಗೆ ಪ್ರಯಾಣ ಮಾಡುತ್ತಿದ್ದರು ಎಂದೂ ಯೋಚಿಸಿದೆ. ಕಛೇರಿ ಮುಗಿಸಿ ತಾವೇ ಡ್ರೖೆವ್ ಮಾಡಿಕೊಂಡು ಹೋಗುತ್ತಿದ್ದರು. ಅವರು ನಮಗೆ ಸ್ಪೂರ್ತಿಯಾಗಿದ್ದರಿಂದ ನಾವು ಕಷ್ಟಪಟ್ಟೆವು. ‘ನೀವು ಕಷ್ಟ ಪಟ್ರಿ ಅಂತ ನಾವೇಕೆ ಕಷ್ಟ ಪಡಬೇಕು’ ಎಂಬ ಅವರ ಪ್ರಶ್ನೆಗೆ ಉತ್ತರ ಕೊಡುವುದೂ ಕಷ್ಟ. ಆದರೆ ನಮಗೆ ಬಂದ ಅಡೆ ತಡೆಗಳು ಮುಂದಿನ ಜೀವನ ಸುಗಮವಾಗಲು ಸಹಕಾರಿಯಾದವು. ನಮ್ಮ ನಡೆನುಡಿಯನ್ನು ತಿದ್ದಿದವು. ಹಾಗಾಗಿ ಜೀವನದಲ್ಲಿ ಎಲ್ಲವೂ ಸುಗಮವಾಗಿಯೇ ಸಿಗುತ್ತ ಹೋದರೆ ಅಂಥ ಬದುಕಿಗೆ ಬೆಲೆ ಇರದು. ಸ್ವಲ್ಪ ಕಷ್ಟ ಅನುಭವಿಸಿದಾಗ ಮಾತ್ರ ಸುಖವೂ ಅದರ ನೂರು ಪಟ್ಟು ಹೆಚ್ಚು ಸಂತೋಷ ಕೊಡುತ್ತದೆ.

ನಾನು ನಡೆದು ಬಂದ ದಾರಿ ನೋಡಿದರೆ ಹೀರೋ ಪುಕ್ ನಿಂದ ಹತ್ತು ಹನ್ನೆರಡು ವಾಹನಗಳನ್ನು ದಾಟಿ ಅವನ್ನೆಲ್ಲ ಎಂಜಾಯ್ ಮಾಡಿದರೂ ಕೊನೆಯಲ್ಲಿ ಬಿಎಂಡಬ್ಲೂ ತಗೊಂಡಾಗ ಆದ ಸಂತೋಷವೇ ಬೇರೆ. ಇದೇ ಬೇರೆಯವರೀಗೂ ಸ್ಪೂರ್ತಿಯಾಗುತ್ತದೆ. ಹೇಗೆಂದರೆ, ನಮಗೆ ಸೂಪರ್ ಸ್ಟಾರ್ ಆದವರು ಸಾಧನೆ ಮಾಡಿದಾಗ ನಾವೂ ಅವರ ಹಾಗೆ ಆಗಬೇಕು ಅಂದುಕೊಳ್ಳುತ್ತೇವೆ. ಹಾಗೆಯೇ ನಾನು ಮೊನ್ನೆ ಇದನ್ನು ಫೇಸ್ ಬುಕ್ ನಲ್ಲಿ ಹಾಕಿದಾಗ, ಜನ ನನ್ನ ಯಶಸ್ಸನ್ನು ಸಂಭ್ರಮಿಸಿದರು. ‘ನೀವು ನಿಮ್ಮದೇ ಕಾರಲ್ಲಿ ಬರತೀರಲ್ವಾ, ನಾವೂ ಅದನ್ನು ನೋಡಬಹುದಲ್ವಾ?’ ಎಂದರು. ಅಂದರೆ ನನ್ನ ಸಂತೋಷವನ್ನು, ಯಶಸ್ಸನ್ನು ಅಭಿಮಾನಿಗಳು ಬಂಧುಮಿತ್ರರು ಎಂಜಾಯ್ ಮಾಡುತ್ತಿರುವುದು ಕೂಡ ನನಗೆ ಸಂತಸದಾಯಕ ಸಂಗತಿ. ಪರಿಶ್ರಮ, ಕಲೆಯ ಕುರಿತಾದ ಏಕಾಗ್ರತೆ ಇದ್ದರೆ ಯಶಸ್ಸು ಬಂದೇ ಬರುತ್ತದೆ. ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು: ಮೊದಲು ಸಿದ್ಧಿ, ಆಮೇಲೆ ಪ್ರಸಿದ್ಧಿ ಎಂದು. ಆ ಮಾತು ಎಷ್ಟೊಂದು ಅರ್ಥಗರ್ಭಿತ ಎಂದು ಈಗೀಗ ನನಗೆ ಅರ್ಥವಾಗುತ್ತಿದೆ. (ಲೇಖಕರು ಬಾನ್ಸುರಿ ವಾದನದಲ್ಲಿ ವಿಶ್ವಪ್ರಸಿದ್ಧರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net