

ಭದ್ರಾವತಿ: ಮದ್ಯವರ್ಜನ ಶಿಬಿರದ ಮೂಲಕ ವ್ಯಸನಿಗಳನ್ನು ಸರಿದಾರಿಗೆ ತಂದು ಕೌಟುಂಬಿಕ ಸಮಸ್ಯೆಗಳನ್ನು ದೂರ ಮಾಡುವ ಧರ್ಮಸ್ಥಳ ಯೋಜನೆಯ ಕಾರ್ಯ ಮೆಚ್ಚುವಂಥದ್ದು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯಿಂದ ಜನ್ನಾಪುರದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯು ಎಲ್ಲರ ಮನಸ್ಸುಗಳನ್ನು ಕಟ್ಟುವ ಮೂಲಕ ಇಡಿ ಸಮಾಜವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುತ್ತಿದೆ ಎಂದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಕರುಣಾಮೂರ್ತಿ ಮಾತನಾಡಿ, ಸಮಾಜದಲ್ಲಿ ಹುಟ್ಟಿದ ಮೇಲೆ ಉತ್ತಮ ಬದುಕು ನಡೆಸಬೇಕು. ಮತ್ತೊಬ್ಬರಿಗೆ ಮಾರ್ಗದರ್ಶಕರಾಗಬೇಕು. ಈ ದಿಸೆಯಲ್ಲಿ ನಮ್ಮ ಜೀವನಶೈಲಿ ಇರಬೇಕಾಗುತ್ತದೆ. ಮಾದಕ ವಸ್ತುಗಳ ದಾಸರಾಗುವ ಬದಲು ಸಮಾಜಮುಖಿ ಚಿಂತಕರಾಗಬೇಕು ಎಂದು ಹೇಳಿದರು.
ಸಂಸ್ಥೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಮಾತನಾಡಿ, ಭಾರತ ದೇಶ ಎತ್ತರಕ್ಕೆ ಬೆಳೆಯುತ್ತಿರುವ ಈ ಸುಸಂದರ್ಭದಲ್ಲಿ ಯುವ ಪೀಳಿಗೆ ಮಾದಕ ವ್ಯಸನಿಗಳಾಗುತ್ತಿರುವುದು ದೊಡ್ಡ ದುರಂತ. ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಭವಿಷ್ಯದ ಜತೆಗೆ ಕುಟುಂಬವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮನಪರಿವರ್ತನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಉದ್ಘಾಟಿಸಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಜಯರಾಮ್ ಗೊಂದಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪಾಲಾಕ್ಷಪ್ಪ, ಪ್ರಕಾಶ್, ವಕೀಲ ಎ.ಟಿ.ರವಿ, ನಗರಸಭೆ ಸದಸ್ಯೆ ಸವಿತಾ ಉಮೇಶ್, ಆನಂದ್ ಇತರರಿದ್ದರು.