ಫ್ರೆಂಡ್​ಷಿಪ್​ ಡೇ: ವೃತ್ತಿ ಬೇರೆ, ಸ್ನೇಹ ಬೇರೆ

Rishabh- rakshith
Published on

ಸಾಮಾನ್ಯವಾಗಿ ಹಿರಿತೆರೆ ಮತ್ತು ಕಿರುತೆರೆಗಳ ಮುಸುಕಿನ ಗುದ್ದಾಟ, ಜಗಳ, ದ್ವೇಷದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಒಳ್ಳೆಯ ಸ್ನೇಹದ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆಯೇ. ಸೆಲೆಬ್ರಿಟಿಗಳು ಹೆಚ್ಚು ಜನರ ಜತೆ ಸೇರದಿದ್ದರೂ, ಅವರಿಗೆ ಅವರದ್ದೇ ಆದ ಗೆಳೆಯರ ವೃಂದವಿರುತ್ತದೆ. ಅವರು ವೃತ್ತಿಗೆ ಸೇರಿದವರೂ ಇರಬಹುದು, ಬೇರೆ ವೃತ್ತಿಯವರೂ ಆಗಿರಬಹುದು. ಈ ಬಾರಿಯ ವಿಶ್ವ ಸ್ನೇಹ ದಿನಕ್ಕಾಗಿ ಒಂದಿಷ್ಟು ಸೆಲೆಬ್ರಿಟಿಗಳು ತಮ್ಮ ಕುಚ್ಚಿಕು ಕುಚ್ಚಿಕೂ ಸ್ನೇಹಿತರ ಬಗ್ಗೆ ಮಾತಾಡಿದ್ದಾರೆ.

ನನ್ನ ಮತ್ತು ರಕ್ಷಿತ್ ಶೆಟ್ಟಿ ಭೇಟಿಯಾಗಿದ್ದು ಅರವಿಂದ್ ಕೌಶಿಕ್ ಅವರ ಕಚೇರಿಯಲ್ಲಿ. ಪ್ರಶಾಂತ್ ಶೆಟ್ಟಿಯಾಗಿದ್ದ ನಾನು ಆವತ್ತು ರಿಷಬ್ ಶೆಟ್ಟಿ ಎಂದು ಮೊದಲ ಬಾರಿ ಪರಿಚಯ ಮಾಡಿಕೊಂಡಿದ್ದೆ. ಧಾರಾವಾಹಿಯಲ್ಲಿ ಅಸೋಸಿಯೆಟ್ ಆಗಿ ಕೆಲಸ ಮಾಡಿದರೆ, ದಿನಕ್ಕೆ 500 ಕೊಡ್ತಾರೆ ಅಂತ ಬಂದಿದ್ದೆ. ಪಕ್ಕದಲ್ಲೇ ರಕ್ಷಿತ್ ಶೆಟ್ಟಿ ಮತ್ತು ಅನಿಶ್ ಕುಳಿತಿದ್ರು. ಶೆಟ್ಟಿ ಅಂದ ತಕ್ಷಣ ಅವರು ನಮ್ಮದು ಉಡುಪಿ ಅಂದ್ರು. ನಾನು ಕುಂದಾಪುರ ಅಂದೆ. ಅದಾದ ಮೇಲೆ ರಕ್ಷಿತ್ ಅಭಿನಯದಲ್ಲಿ ‘ತುಗ್ಲಕ್’ ಅನ್ನೋ ಸಿನಿಮಾ ಶುರು ಮಾಡಿದರು ಅರವಿಂದ್. ನಾನು ಎರಡು ವರ್ಷ ವಿಜಾಪುರಕ್ಕೆ ಕೆಲಸ ನಿಮಿತ್ತ ಹೋಗಿ ಬರುವಷ್ಟರಲ್ಲಿ ಆ ಸಿನಿಮಾ ಮುಗಿಸಿದ್ದರು. ಯಾರೋ ದೊಡ್ಡ ಮನುಷ್ಯರ ಮಗ, ಬೆಳ್ಳಬೆಳ್ಳಗಿದ್ದಾನೆ. ಸಾಫ್ಟ್​ವೇರ್ ಬಿಟ್ಟು ಬಂದಿರಬೇಕು ಎಂದು ಮನದಲ್ಲಿಯೇ ಅಂದುಕೊಂಡಿದ್ದೆ. ಆತನ ಹಾರ್ಡ್​ವರ್ಕ್ ನೋಡಿ ಖುಷಿ ಆಯ್ತು. ಸಿನಿಮಾ ರಿಲೀಸ್ ಆಗಿ, ಮೂರನೇ ದಿನಕ್ಕೆ ಫ್ಲಾಪ್ ಎಂದು ಗೊತ್ತಾಯ್ತು. ಜತೆಗಿದ್ದವರು ಕೈ ಬಿಟ್ಟರು. ಒಂದಷ್ಟು ಸಾಲ ತಲೆ ಮೇಲೆ ಬಿತ್ತು. ಇನ್ನೇನು ಕರಿಯರ್ ಮುಗಿಯಿತು ಎಂದು ತ್ರಿಭುವನ್ ಥಿಯೇಟರ್ ಬಳಿ ನನ್ನ ಮುಂದೆ ಕಣ್ಣೀರಿಟ್ಟ ರಕ್ಷಿತ್. ಅಂದು ಅವನ ಜತೆ ನಿಂತೆ. ಪ್ರತಿದಿನ ಫೋನ್ ಮಾಡಿ, ಸುಮ್ಮನೆ ಮಾತನಾಡುತ್ತಿದ್ದೆ. ಬೆಂಗಳೂರಿನ ಹೋಟೆಲ್ ಊಟದ ರುಚಿ ಪರಿಚಯಿಸಿದೆ. ಆಮೇಲೆ ‘ರಿಕ್ಕಿ’ ಕಥೆ ಹೇಳಿದೆ... ಅದಾದ ಬಳಿಕ ಏನೆಲ್ಲ ಆಯ್ತು ಎಂಬುದು ಎಲ್ಲರಿಗೂ ಗೊತ್ತು. ಈಗಲೂ ನಾನು, ಅವನು ಹಾಗೆಯೇ ಇದ್ದೇವೆ. ವೃತ್ತಿ ಬೇರೆ, ಸ್ನೇಹ ಬೇರೆ. ಎರಡನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗಿಲ್ಲ. ರಕ್ಷಿತ್ ನನಗೆ ಸ್ವಂತ ಸಹೋದರನಿಗಿಂತ ಹೆಚ್ಚಾಗಿದ್ದಾನೆ ಎನ್ನುತ್ತಾರೆ ರಿಷಬ್ ಶೆಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net