ಕ್ರೀಡಾಕೂಟದಿಂದ ಸೌಹಾರ್ದ, ಸಮನ್ವಯ ವೃದ್ಧಿ

tth cricket
ತೀರ್ಥಹಳ್ಳಿಯಲ್ಲಿ ಪಪಂನಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗಳಿಸಿದ ಮೆಸ್ಕಾಂ ತಂಡ.
Published on

ತೀರ್ಥಹಳ್ಳಿ: ಸರ್ಕಾರಿ ನೌಕರರ ನಡುವಿನ ಅಧಿಕಾರ ಮತ್ತಿತರ ಅಂತರ ದೂರ ಮಾಡಿ ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸಲು ಕ್ರೀಡೆ ಸಹಕಾರಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಪಟ್ಟಣ ಪಂಚಾಯಿತಿಯಿಂದ ಆಯೋಜಿಸಿದ್ದ ಎರಡು ದಿನಗಳ ಸರ್ಕಾರಿ ಇಲಾಖೆಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡೆ ಮಾನಸಿಕ ನೆಮ್ಮದಿ ಮೂಡಿಸುವ ಮಾಧ್ಯಮ. ರಾಜ್ಯದ ಇತರೇ ಕ್ಷೇತ್ರಗಳಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ಉತ್ತಮವಾಗಿದೆ. ಹೀಗಾಗಿ ಶಾಸಕನಾಗಿ ನಾನೂ ನಿರಾಳವಾಗಿ ಕಾರ್ಯನಿರ್ವಸಲು ಸಾಧ್ಯವಾಗಿದೆ ಎಂದರು.

ಬಹುತೇಕ ಸರ್ಕಾರಿ ನೌಕರರು ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಸಾರ್ವಜನಿಕರೊಂದಿಗೆ ತಾಳ್ಮೆ ಕಳೆದುಕೊಳ್ಳದೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯ. ಈ ದಿಸೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸತತವಾಗಿ ನಡೆದಿರುವ ಸರ್ಕಾರಿ ನೌಕರರು ಮತ್ತು ಸೇವಾಸಂಸ್ಥೆಗಳ ನಡುವಿನ ಕ್ರೀಡಾಕೂಟ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ತಾಲೂಕಿಗೆ ಆಗಮಿಸುವ ಅಧಿಕಾರಿಗಳು ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಸಹಕರಿಸುತ್ತಿರುವುದು ಪ್ರಶಂಸನೀಯ. ಮುಖ್ಯವಾಗಿ ಕ್ರೀಡಾ ಚಟುವಟಿಕೆ ಇದಕ್ಕೆ ಕಾರಣವಾಗಿದೆ ಎಂದರು.

ಕ್ರೀಡಾಕೂಟದಲ್ಲಿ 16 ತಂಡಗಳು ಪಾಲ್ಗೊಂಡಿದ್ದು, ಫೈನಲ್‌ನಲ್ಲಿ ಮೆಸ್ಕಾಂ ತಂಡವು ಕಂದಾಯ ಇಲಾಖೆ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಶಬನಂ, ರತ್ನಾಕರ ಶೆಟ್ಟಿ, ಬಿ.ಗಣಪತಿ, ಯತಿರಾಜ್, ಬಿ.ಆರ್.ರಾಘವೇಂದ್ರ ಶೆಟ್ಟಿ, ಜ್ಯೋತಿ ಮೋಹನ್, ಮಾಜಿ ಸದಸ್ಯ ಟಿ.ಎಲ್.ಸುಂದರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net