ಗೋವಾಗೆ ಹೊರಟ್ಟಿದ್ದ ಸ್ನೇಹಿತರು ನೈಸ್ ರಸ್ತೆಯಲ್ಲಿ ಆಕ್ಸಿಡೆಂಟ್

accident (1)
Published on

ಬೆಂಗಳೂರು: ಗೋವಾಗೆ ಹೋಗಲು ಸ್ಕಾರ್ಪಿಯೋ ಕಾರಿನಲ್ಲಿ ಮೂವರು ಸ್ನೇಹಿತರು ನೈಸ್ ರಸ್ತೆ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಕೆಐಎ) ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿಯ ವಿನೋದ್ (34), ಚೀಲೂರು ಗ್ರಾಮದ ಕುಮಾರ್ (35) ಮತ್ತು ಕಾಳೇಗೌಡನದೊಡ್ಡಿ ನಿವಾಸಿ ನಂಜೇಶ್‌ಗೌಡ (35) ಮೃತ ವ್ಯಕ್ತಿಗಳು. ಇವರು ಕಾರು ಡಿವೈಡರ್ ದಾಟಿ ಮತ್ತೊಂದು ಕಾರಿಗೆ ಗುದ್ದಿದ ಪರಿಣಾಮ ಶಿವರಾಮಕೃಷ್ಣ (41) ಮತ್ತು ಪ್ರಸನ್ನ (40) ಎಂಬುವರು ಗಾಯಗೊಂಡಿದ್ದು, ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಮತ್ತು ಕುಮಾರ್ ಮತ್ತು ನಂಜೇಶ್‌ಗೌಡ ಹಾಲು ಉತ್ಪಾದಕ ಸಂಘದ ಸದಸ್ಯರಾಗಿದ್ದರು. ಸೋಮವಾರ ಗೋವಾಗೆ ತೆರಳಲು ಸ್ಕಾರ್ಪಿಯೋ ಕಾರಿನಲ್ಲಿ ಮೂವರು ಸ್ನೇಹಿತರು, ಕನಕಪುರ ರಸ್ತೆ ಮಾರ್ಗವಾಗಿ ಬಂದು ಸೋಂಪುರ ಸರ್ಕಲ್‌ನಲ್ಲಿ ನೈಸ್ ರಸ್ತೆಯನ್ನು ಪ್ರವೇಶ ಮಾಡಿ ಕೆಐಎಗೆ ಹೋಗುತ್ತಿದ್ದರು. ಮಧ್ಯಾಹ್ನ 3.45ರಲ್ಲಿ ಕೆಂಗೇರಿ ಟೋಲ್ ಸಮೀಪದಲ್ಲಿ ಸ್ಕಾರ್ಪಿಯೋ ಕಾರು ಡಿವೈಡರ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಮೈಸೂರು ರಸ್ತೆಯತ್ತ ತೆರಳುತ್ತಿದ್ದ ಎಕ್ಸ್‌ಯುವಿ 700 ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕಾರ್ಪಿಯೋ ಕಾರು ಉರುಳಿ ಬಿದ್ದು ಅದರಲ್ಲಿದ್ದ ನಂಜೇಶ್, ವಿನೋದ್, ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎಕ್ಸ್‌ಯುವಿ 700ನಲ್ಲಿದ್ದ ಶಿವರಾಮಕೃಷ್ಣ, ಪ್ರಸನ್ನಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಅವರು ಪರಿಶೀಲನೆ ನಡೆಸಿದರು. ಸ್ಕಾರ್ಪಿಯೋ ಕಾರಿನ ಚಾಲಕ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಕಾರ್ಪಿಯೋ ಕಾರಿನಲ್ಲಿ ಇದ್ದವರು ಸೀಟ್ ಬೆಲ್ಪ್ ಧರಿಸಿರಲಿಲ್ಲ. ಅದಕ್ಕಾಗಿ ಏರ್ ಬಲೋನ್ ಓಪನ್ ಆಗಿಲ್ಲ. ಸ್ಪೀಡ್ ಮೀಟರ್ 147 ಕಿ.ಮೀಟರ್‌ಗೆ ಸ್ಥಗಿತವಾಗಿದೆ. ರಸ್ತೆಯಲ್ಲಿ ಬ್ರೇಕ್ ಹಾಕಿರುವ ಕುರುಹು ಸಹ ಇಲ್ಲ. ಆದ್ದರಿಂದ ಸ್ಕಾರ್ಪಿಯೋ ಕಾರು ಚಾಲಕ ಅತೀ ವೇಗವಾಗಿ ಬಂದಿದ್ದು, ಮಳೆ ಸಹ ಸುರಿಯುತ್ತಿತ್ತು. ಈ ವೇಳೆ ಡಿವೈಡರ್‌ಗೆ ಟಯರ್ ತಾಗಿ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದ ಎಕ್ಸ್‌ಯುವಿ 700ಗೆ ಡಿಕ್ಕಿ ಹೊಡೆದಿದೆ ಎಂದು ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net