

ಬಿಹಾರ: ಕೇವಲ 500 ರೂ. ಹಣದ ವಿಚಾರಕ್ಕೆ ಸ್ನೇಹಿತನ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳು, ಆತನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬಿಹಾರದ ಅರಾದಲ್ಲಿ ವರದಿಯಾಗಿದ್ದು, ಮೋಹನ್ ಸಿಂಗ್ ಎಂದು ಗುರುತಿಸಲಾದ 20 ವರ್ಷದ ಕೂಲಿ ಕಾರ್ಮಿಕನನ್ನು 500 ರೂ. ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬಾರಾ ಬಸಂತ್‌ಪುರ ಗ್ರಾಮದ ನಿವಾಸಿಯಾಗಿರುವ ಸಿಂಗ್, ತನ್ನ ಸ್ನೇಹಿತರೊಡನೆ ಸಂಭ್ರಮಾಚರಣೆ ಎಂದು ಮನೆಯಿಂದ ಹೊರಗೆ ಹೋದಾಗ ಈ ಘಟನೆ ಸಂಭವಿಸಿದೆ. ಪಾರ್ಟಿ ಮಾಡುವ ನೆಪದಲ್ಲಿ ಬರಲು ಹೇಳಿದ ಆತನ ಸ್ನೇಹಿತರು, ಸಂಭ್ರಮದ ಮಧ್ಯೆ ಚಾಕುವಿನಿಂದ ಹಿರಿದು ಅಮಾನುಷವಾಗಿ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ. ಘಟನೆಯ ಬೆನ್ನಲ್ಲೇ ಮೋಹನ್ ಮೃತದೇಹ ಸನ್ವಾರಿ ಸೇತುವೆ ಬಳಿಯ ಹೊಲದಲ್ಲಿ ಪತ್ತೆಯಾಗಿದೆ.
ಮೃತ ಮೋಹನ್ ಶವವಿದ್ದ ಸ್ಥಳವನ್ನು ಪರಿಶೀಲಿಸಿದಾಗ ಕೊಲೆಯ ಭೀಕರತೆ ಕಂಡುಬಂದಿದ್ದು, ಆತನ ಕಣ್ಣುಗಳನ್ನು ತೀಕ್ಷ್ಣವಾದ ಉಪಕರಣಗಳಿಂದ ಕಿತ್ತಿದ್ದಾರೆ ಮತ್ತು ದೇಹದ ಮೇಲ್ಭಾಗದಲ್ಲಿ ಗಾಯದ ಗುರುತುಗಳಿವೆ. ಆರೋಪಿಗಳು ಮೋಹನ್ ಸಿಂಗ್ನನ್ನು ಮನೆಯಿಂದ ಹೊರಗೆ ಕರೆದೊಯ್ದು ಮಾರಣಾಂತಿಕವಾಗಿ ಗಾಯಗೊಳಿಸಿ ಶವವನ್ನು ಹೊಲದಲ್ಲಿ ಬಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಮೃತದೇಹವನ್ನು ಅರಾ ಸದರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).