

ಶಿವಮೊಗ್ಗ: ನಗರದ ಹೊರವಲಯದ ರಾಗಿಗುಡ್ಡದಲ್ಲಿ ಕಳೆದ ವರ್ಷ ಆಗಿದ್ದ ಗಲಭೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸುವ ಜತೆಗೆ ಈ ಬಾರಿ ಹಿಂದು-ಮುಸ್ಲಿಮರು ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸುವ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಮಂಗಳವಾರ ರಾತ್ರಿ ಹಿಂದು-ಮುಸ್ಲಿಂ ಮುಖಂಡರು ರಾಗಿಗುಡ್ಡದ ಎಲ್ಲ ಗಣೇಶ ಪೆಂಡಾಲ್‌ಗಳಿಗೆ ಒಟ್ಟಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲಿ ರಾಗಿಗುಡ್ಡ ಶಾಂತಿ ಪಡೆ ಸಮಿತಿ ಸದಸ್ಯರು, ಅಲ್ಲಿನ ಹಿಂದು-ಮುಸ್ಲಿಂ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದ ವಿವಿಧ ಪೆಂಡಾಲ್ಗಳಿಗೆ ಒಟ್ಟಾರೆ ಭೇಟಿ ನೀಡಿ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಗಿಗುಡ್ಡದ ನೂರ್ ಮಸೀದಿ ಅಧ್ಯಕ್ಷ ಭಾಷಾ ಸಾಬ್, ಹಿಂದು ಮತ್ತು ಮುಸ್ಲಿಂ ಮುಖಂಡರು ಭಾವೈಕ್ಯತೆಗಾಗಿ ಒಟ್ಟಿಗೆ ಗಣೇಶನಿಗೆ ಪೂಜೆ ಮಾಡಿದ್ದೇವೆ. ನಮ್ಮ ದೇಶ ವಿವಿಧ ಜಾತಿ, ಧರ್ಮ ಮತ್ತು ಜನಾಂಗದ ಜನರು ಇರುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸರ್ವ ಧರ್ಮೀಯರ ದೇಶವಾಗಿದ್ದು ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ನಮ್ಮೆಲ್ಲರ ಭಾವೈಕ್ಯತೆ ಮತ್ತು ಒಗ್ಗಟ್ಟನ್ನು ತೋರಿಸಲು ಒದಗಿಬಂದಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡಿ ರಾಗಿಗುಡ್ಡದ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಬ್ಬದ ಆಚರಣೆ ಮತ್ತು ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಲೂ ಕಾರಣೀಭೂತರಾಗಿರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವಕೀಲ ರಾಮಚಂದ್ರ ಮಾತನಾಡಿ, ಪೊಲೀಸ್ ಇಲಾಖೆಯ ಅವಿರತ ಸೇವೆಯಿಂದ ರಾಗಿಗುಡ್ಡದಲ್ಲಿ ಮತ್ತೆ ಶಾಂತಿ ನೆಲೆಸಿದೆ. ಹಬ್ಬದ ಯಶಸ್ಸಿನಲ್ಲಿ ನಮ್ಮೆಲ್ಲರ ಸಹಮತ ಮುಖ್ಯವಾಗಿದ್ದು ಯಾರೋ ಕೆಲ ಜನ ಮಾಡಿದ ಕಿಡಿಗೇಡಿತನದಿಂದ ಮತ್ತು ಯಾವುದೋ ಸನ್ನಿವೇಶದಲ್ಲಿ ಕಳೆದ ಬಾರಿ ಕಹಿ ಘಟನೆಗಳು ಜರುಗಿವೆ. ಆದರೆ ಅದೆಲ್ಲವನ್ನು ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಂಡು ಒಟ್ಟಾಗಿ ಮುಂದೆ ಸಾಗಬೇಕಿದೆ ಎಂದು ಸಲಹೆ ನೀಡಿದರು.
ದೇವಸ್ಥಾನ ಸಮಿತಿ ಸದಸ್ಯ ಗಾರೆ ನಾಗಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನಾವೆಲ್ಲರೂ ಶ್ರಮಿಸಬೇಕು. ಸಹೋದರತ್ವದ ಮನೋಭಾವದೊಂದಿಗೆ ಎಲ್ಲ ಧರ್ಮದ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ಎಲ್ಲರೂ ಸೇರಿ ಹಬ್ಬಗಳನ್ನು ಸೌಹಾರ್ದತೆಯಿಂದ ವಿಜೃಂಭಣೆಯಾಗಿ ಆಚರಿಸುವ ಮೂಲಕ ಹಿಂದಿನ ವರ್ಷ ಈ ಪ್ರದೇಶದಲ್ಲಿ ಜರುಗಿದ ಕಳಂಕ ತೊಳೆಯಬೇಕು. ನಮ್ಮ ಮುಂದಿನ ಪೀಳಿಗೆಗೆ, ಮಕ್ಕಳಿಗೆ ಮತ್ತು ನಮ್ಮ ಸಮಾಜದ ಇತರರಿಗೆ ಉತ್ತಮ ಸಂದೇಶವನ್ನು ಸಾರುವ ಮುಖಾಂತರ ಮಾದರಿಯಾಗಬೇಕು ಎಂದು ಹೇಳಿದರು.
ನೂರ್ ಮಸೀದಿ ಉಪಾಧ್ಯಕ್ಷ ಸಾಧಿಕ್, ಮುಖಂಡರಾದ ಬಸವರಾಜ್, ನಾಗರತ್ನಮ್ಮ, ರುದ್ರೋಜಿ ರಾವ್, ಮಾರುತಿ, ಭಾಷಾ ಸಾಬ್, ಸಯ್ಯದ್ ಅಕ್ರಂ, ರಾಗಿಗುಡ್ಡದ ಇತರೆ ಸಾರ್ವಜನಿಕರು ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್‌ಐ ಸ್ವಪ್ನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.