ಪೆನ್ಸಿಲ್ ವಿಚಾರಕ್ಕಾಗಿ ಸ್ನೇಹಿತನ ಮೇಲೆ ಮಚ್ಚಿನಿಂದ ಹಲ್ಲೆ: ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿದೆ | Tamil Nadu

Tamil Nadu
Published on

Tamil Nadu: 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಆತನ ಸ್ನೇಹಿತ ಪೆನ್ಸಿಲ್​ಗಾಗಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಕೆಲವು ತಿಂಗಳ ಹಿಂದೆ ಪೆನ್ಸಿಲ್ ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಮಂಗಳವಾರ (ಏ.15) 8ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಸ್ನೇಹಿತ ಶಾಲಾ ಬ್ಯಾಗಿನಲ್ಲಿ ಬಚ್ಚಿಟ್ಟಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿಗೆ ಎರಡು-ಮೂರು ಸ್ಥಳಗಳಲ್ಲಿ ಹಲವು ಗಾಯಗಳಾಗಿವೆ. ಅವರ ಜಗಳವನ್ನು ನಿಲ್ಲಿಸಲು ಬಂದ ಶಿಕ್ಷಕರ ಮೇಲೂ ಸಣ್ಣಪುಟ್ಟ ಗಾಯವಾಗಿದ್ದು, ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಬ್ಬರು ಹುಡುಗರ ನಡುವೆ ಕೆಲವು ತಿಂಗಳ ಹಿಂದೆ ಪೆನ್ಸಿಲ್ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಗಿತ್ತು ಮತ್ತು ಅಂದಿನಿಂದ ಮಾತನಾಡುತ್ತಿರಲಿಲ್ಲ. ಮಂಗಳವಾರ, ಹಲ್ಲೆಕೋರ ತನ್ನ ಶಾಲಾ ಬ್ಯಾಗ್‌ನೊಳಗೆ ಅಡಗಿಸಿಟ್ಟಿದ್ದ ಆಯುಧವನ್ನು ತಂದು ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ. ಕಾನೂನು ನಿಯಮಗಳ ಪ್ರಕಾರ ಹಲ್ಲೆಮಾಡಿದವನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, "ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿ, ರಾಜ್ಯದಲ್ಲಿ ಕೊಲೆ, ದರೋಡೆ, ಲೈಂಗಿಕ ಅಪರಾಧಗಳು ಮತ್ತು ಜಾತಿ ಆಧಾರಿತ ದಾಳಿಗಳು ಹೆಚ್ಚಾಗಲು ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಸ್ತವ್ಯಸ್ತ ಆಡಳಿತ ಕಾರಣ" ಎಂದು ಆರೋಪಿಸಿದ್ದಾರೆ.

ನಮ್ಮ ಮಕ್ಕಳು ಶಾಲೆಯಲ್ಲಿ ಪೆನ್ಸಿಲ್‌ಗಾಗಿ ಆಯುಧವನ್ನು ಅಡಗಿಸಿಟ್ಟು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುವಷ್ಟು ಅವರ ಮನಸ್ಸಿನಲ್ಲಿ ಹಿಂಸೆ ಬೇರೂರಿದೆಯೇ ಎಂಬ ಅನುಮಾನಗಳು ತಮಿಳುನಾಡಿನ ಜನರಲ್ಲಿ ಮೂಡಿವೆ ಎಂದು ನಾಗೇಂದ್ರನ್ ಹೇಳಿದ್ದಾರೆ. ಈ ಘಟನೆಯನ್ನು ಸರಿಯಾಗಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸ್ಟಾಲಿನ್​ಗೆ ಒತ್ತಾಯಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೂಡ ಈ ಘಟನೆಯನ್ನು ಖಂಡಿಸಿದ್ದು, ಇಂತಹ ಹಿಂಸಾಚಾರದ ಸಂಸ್ಕೃತಿಯೂ ನಾವು ಒಂದು ಸಮಾಜವಾಗಿ ಹೇಗೆ ವಿಫಲರಾಗಿದ್ದೇವೆ ಎಂಬುದನ್ನು ತೋರಿಸಿದೆ ಮತ್ತು ಇದರ ಜವಾಬ್ದಾರಿ ಸಮಾಜ, ಪೋಷಕರು, ಶಿಕ್ಷಕರು ಮತ್ತು ಡಿಎಂಕೆ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net