ಇಂದು ವಿಶ್ವ ಪುಸ್ತಕ ದಿನ; ಪುಸ್ತಕ ಪ್ರಪಂಚದಲ್ಲಿ ತಾಜಾ ಅಲೆಗಳು

ವಿಜಯವಾಣಿ (1)
Published on
ಇಂದು ವಿಶ್ವ ಪುಸ್ತಕ ದಿನ. ಕೃತಿಸ್ವಾಮ್ಯದ ಅರಿವು ಮೂಡಿಸುವ ದಿನವೂ ಹೌದು. ಕೋವಿಡ್ ನಂತರ ಓದುಗರ, ಲೇಖಕರ ಮತ್ತು ಪ್ರಕಾಶಕರ ಸಂಖ್ಯೆ ಹೆಚ್ಚಿದೆ. ಯುವಜನರು ಮೊಬೈಲ್ ಫೋನ್​ ಪಕ್ಕಕ್ಕಿಟ್ಟು ಪುಸ್ತಕವನ್ನು ಆತ್ಮೀಯ ಸ್ನೇಹಿತವಾಗಿಸಿಕೊಳ್ಳುತ್ತಿದ್ದಾರೆ. ಉತ್ತಮ ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಓದುಗರನ್ನು ತಲುಪಲು ಇನ್ನಷ್ಟು ಪ್ರಯತ್ನಗಳು ಆಗಬೇಕಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ನಾಡಿನ ಮೂವರು ಹಿರಿಯ ಪ್ರಕಾಶಕರ ಮಾತುಗಳು ಇಲ್ಲಿವೆ.

ಮಾರುಕಟ್ಟೆ ಹಿಗ್ಗಿಸಬೇಕಿದೆ

* ವೀರಕಪುತ್ರ ಎಂ. ಶ್ರೀನಿವಾಸ

ವೀರಲೋಕ ಪ್ರಕಾಶನ, ಬೆಂಗಳೂರು

ಕನ್ನಡ ಪುಸ್ತಕೋದ್ಯಮ ಈಗ ನಿಂತ ನೀರಲ್ಲ ಅದು ಹರಿವ ನದಿ. ಈ ಕೆಲಸ ಒಂದೆರಡು ದಶಕಗಳ ಹಿಂದೆಯೇ ಮಾಡಿದಿದ್ದರೆ ಖಂಡಿತವಾಗಿಯೂ ಕನ್ನಡ ಪುಸ್ತಕೋದ್ಯಮ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ನನ್ನ ಪುಸ್ತಕ ಬಿಡುಗಡೆಗೊಂಡಿದ್ದೇ ನನ್ನ ಸೌಭಾಗ್ಯವೆಂದು ಲೇಖಕನು, ಬಿಡುಗಡೆಗೊಳಿಸಿದ್ದೇ ಮಹತ್ಕಾರ್ಯವೆಂದು ಪ್ರಕಾಶಕನು ಭಾವಿಸಿದ್ದರಿಂದ ಮತ್ತು ಅದೇ ಹಂತದಲ್ಲಿ ಸುಸ್ತಾಗಿದ್ದರಿಂದ ಮಾರ್ಕೆಟಿಂಗ್ ಕಡೆಗೆ ಯಾರೊಬ್ಬರೂ ಗಮನ ಹರಿಸಲಿಲ್ಲ. ಮಾರುಕಟ್ಟೆ ವಿಸ್ತರಣೆ ಎಂಬುದು ಸಂಸ್ಕೃತಿಯೊಂದನ್ನು ಪ್ರಭಾವಿಯನ್ನಾಗಿಸುವುದೇ ವಿನಃ ಅದರಲ್ಲಿ ಅಪಾಯವೆನಿಸುವಂತಹುದ್ದು ಏನೂ ಇಲ್ಲ. ಒಳ್ಳೇ ಪುಸ್ತಕ ತನ್ನ ಓದುಗರನ್ನು ತಾನೇ ಹುಡುಕಿಕೊಳ್ಳುತ್ತೆ ಎಂಬ ಮಾತುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ನಾವೆಲ್ಲರೂ ನಂಬಿ ಕೂತುಬಿಟ್ಟೆವು.

ಕಾಲ ಬದಲಾದ ಮೇಲೆ ಆ ಸ್ಟೇಟ್ಮೆಂಟ್ ಅರ್ಥ ಕಳೆದುಕೊಂಡಿದೆ ಎಂಬುದನ್ನು ನಾವು ಸಕಾಲದಲ್ಲಿ ಗ್ರಹಿಸಬೇಕಿತ್ತು. ವರ್ಷಕ್ಕೆ ನೂರಿನ್ನೂರು ಕೃತಿಗಳು ಪ್ರಕಟಗೊಳ್ಳುತ್ತಿದ್ದ ಕಾಲದಲ್ಲಿ, ಪತ್ರಿಕೆಗಳು ಪುಸ್ತಕಗಳಿಗೆ ಸಾಕಷ್ಟು ಪ್ರಾಮುಖ್ಯ ಮತ್ತು ಸ್ಥಳಾವಕಾಶ ನೀಡುತ್ತಿದ್ದ ಕಾಲದಲ್ಲಿ ಆ ಹೇಳಿಕೆ ಸರಿಯಾಗಿತ್ತು. ಆದರೆ ಈಗ ವರ್ಷಕ್ಕೆ ಹನ್ನೆರಡು ಸಾವಿರ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಪತ್ರಿಕೆಗಳಲ್ಲಿ ಅಂಗೈಗಲದಷ್ಟು ಜಾಗ ಮಾತ್ರ ಲಭ್ಯವಿದೆ. ಹೀಗಿದ್ದಾಗ ಒಳ್ಳೆಯ ಪುಸ್ತಕ ಓದುಗನನ್ನು ಹೇಗೆ ಹುಡುಕಿಕೊಳ್ಳಬೇಕು? ಇನ್ನು ಡಿಜಿಟಲ್ ಮೀಡಿಯಾದ ಕತೆಯಂತೂ ಕೇಳುವುದೇ ಬೇಡ. ಅಲ್ಲಿ ಎಲ್ಲರೂ ತಮ್ಮ ತಮ್ಮ ಪುಸ್ತಕಗಳ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಗುಡ್ ರೀಡ್ ಗುರುತಿಸುವುದು ಹೇಗೆ? ಪತ್ರಿಕೆಯೋ, ವ್ಯಕ್ತಿಯೋ, ಡಿಜಿಟಲ್ ಮಾಧ್ಯಮವೋ ಯಾವುದೋ ಒಂದರ ಮೂಲಕ ಪ್ರಭಾವಿತನಾಗಿ ಯಾವುದೋ ಒಂದು ಪುಸ್ತಕವನ್ನು ಓದಿಗೆ ಆಯ್ದುಕೊಳ್ಳುವ ಓದುಗನಿಗೆ ಆ ಪುಸ್ತಕ ನಿರಾಸೆ ಮಾಡಿಬಿಟ್ಟರೆ ಮತ್ತೆ ಅವನು ಕನ್ನಡ ಪುಸ್ತಕ ಓದುತ್ತಾನೆಯೇ?

ಈ ಕಾರಣದಿಂದ, ಅವನಿಗೆ ನಿರಾಸೆ ಮಾಡದಂತಹ ಓದನ್ನು ದಕ್ಕಿಸಿಕೊಡುವುದು ಇಂದಿನ ಬಹುದೊಡ್ಡ ಸವಾಲು. ಜೊತೆಗೆ ಕನ್ನಡ ಪುಸ್ತಕಗಳಿಗೆ ಇಡೀ ನಾಡಿನಾದ್ಯಂತ ನಾಲ್ಕೆ ದು ಮಳಿಗೆಗಳು ಬಿಟ್ಟರೆ ಬೇರೆ ವಿತರಣಾ ವ್ಯವಸ್ಥೆಯೇ ಇಲ್ಲ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಅಂತಹ ಮಹತ್ತರ ಭಾಷೆಯ ಪುಸ್ತಕಗಳಿಗೆ ವಿತರಣಾ ವ್ಯವಸ್ಥೆಯೇ ಇಲ್ಲವೆಂಬುದು ನಿಜಕ್ಕೂ ನೋವಿನ ವಿಷಯ. ಇದು ಮತ್ತೊಂದು ಬಹುಮುಖ್ಯ ಸವಾಲೆಂದು ಭಾವಿಸಿದ್ದೇನೆ. ಒಂದು ವೇಳೆ ನಾವು ಈ ಗುಡ್ ರೀಡ್ ಮತ್ತು ವಿತರಣಾ ವ್ಯವಸ್ಥೆಗಳನ್ನು ಸರಿಯಾಗಿಸಿಕೊಂಡುಬಿಟ್ಟರೆ ಪುಸ್ತಕೋದ್ಯಮಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವಷ್ಟು ಅವಕಾಶಗಳಿವೆ. ಸರ್ಕಾರದ ನೆರವಿಲ್ಲದೆಯೇ ಸ್ಪರ್ಧೆ ಗೆಲ್ಲುವ ಸಾಧ್ಯತೆ ಇದೆ. ಉತ್ತಮ ಕೃತಿಯೊಂದು ಹತ್ತಾರು ಸಾವಿರ ಮಾರಾಟಗೊಳ್ಳುವ ಭರವಸೆ ಇದೆ.

ಪ್ರಕಾಶನ ಕ್ಷೇತ್ರ ಮೈ ಚಳಿ ಬಿಡಲು ಇದು ಸಕಾಲ. ಪುಸ್ತಕ ಬಿಡುಗಡೆಗೊಳಿಸುವುದೇ ಸಾಧನೆ ಎಂಬ ಮನಸ್ಥಿತಿಯಿಂದ ಈ ಕ್ಷೇತ್ರ ಹೊರಬರಬೇಕಿದೆ. ನಿಜವಾಗಿಯೂ ಅದು ಮಾಡಬೇಕಿರುವುದು ಮಾರ್ಕೆಟಿಂಗ್! ಯಾವುದು ಕಣ್ಣಿಗೆ ಕಾಣುತ್ತಿರುತ್ತೋ ಅದೇ ಚಾಲ್ತಿಯಲ್ಲಿರುತ್ತೆ ಎಂಬ ತತ್ವವನ್ನು ಪುಸ್ತಕಲೋಕದವರಿಗೆ ಹೇಳಿಕೊಡಬೇಕಾ? ಹೇಳಿಕೊಡಬೇಕಾಗಿದೆ ಎಂಬುದು ನೋವಿನ ವಿಷಯ. ಇನ್ನಾದರೂ ಕನ್ನಡ ಪುಸ್ತಕಗಳ ಸಾಂಪ್ರದಾಯಿಕ ಬಿಡುಗಡೆಗಳನ್ನು ಮರೆತು, ಮಾರುಕಟ್ಟೆ ಹಿಗ್ಗಿಸಲು ನೆರವಾಗುವಂತಹ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ನೆನಪಿರಲಿ, ಹತ್ತು ಜನ ಹತ್ತು ಹೊಸ ತಂತ್ರಗಳನ್ನು ಪರಿಚಯಿಸಿದಾಗ ಅವುಗಳಲ್ಲಿ ಒಂಬತ್ತು ಸೋತರೂ ಯಾವುದೋ ಒಂದು ತಂತ್ರ ಆ ಹತ್ತೂ ಜನರಿಗೂ ನೆರವಾಗಿಬಿಡಬಲ್ಲದು. ಮೂರು ಪ್ರಕಾಶಕರ ಸಂಘಗಳಾಗಿವೆ! ಇನ್ನೂ ನೂರಾಗಲಿ. ಆದರೆ ಪ್ರತಿ ಪ್ರಕಾಶಕರ ಸಂಘವೂ ಅನುದಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸುವುದನ್ನಷ್ಟೇ ತಮ್ಮ ಅಜೆಂಡಾವಾಗಿಸಿಕೊಳ್ಳದೆ ವಿತರಣೆ ಮತ್ತು ಮಾರ್ಕೆಟಿಂಗ್ ವಿಷಯವಾಗಿ ಕೆಲಸ ಮಾಡುವಂತಾಗಬೇಕು.

ಮೊನ್ನೆ ಯಾವುದೋ ಒಂದು ಇಂಗ್ಲಿಷ್ ಪುಸ್ತಕದ ಅಂಗಡಿಗೆ ಹೋಗಿದ್ದೆ. ಅಲ್ಲಿನ ಬಿಲ್ ಕೌಂಟರಿನಲ್ಲಿ ಒಂದಷ್ಟು ಯುವಕ, ಯುವತಿಯರು ನಿಂತಿದ್ದರು. ಅವರೆಲ್ಲರೂ ಡಿಸ್ಕೌಂಟ್ ಇಲ್ವಾ? ಯಾವ ಪುಸ್ತಕ ಟ್ರೆಂಡಿಂಗ್‌ನಲ್ಲಿದೆ ಅನ್ನೋದನ್ನು ಅಚ್ಚ ಕನ್ನಡದಲ್ಲಿಯೇ ಕೇಳುತ್ತಿದ್ದರು. ಆದರೆ ಅವರು ಖರೀದಿಸಿದ ಪುಸ್ತಕಗಳು ಮಾತ್ರ ಅಪ್ಪಟ ಇಂಗ್ಲಿಷ್! ಅಂದ್ರೆ ಕನ್ನಡಿಗರನ್ನು ಇಂಗ್ಲಿಷ್ ಪುಸ್ತಕಗಳಿಗೆ ದತ್ತು ಕೊಟ್ಟುಬಿಟ್ಟಿದ್ದೇವೆ ಅಥವಾ ಬಿಟ್ಟುಕೊಟ್ಟುಬಿಟ್ಟಿದ್ದೇವೆ. ಇಂಗ್ಲಿಷಿನಷ್ಟೇ ಕನ್ನಡದ ಪುಸ್ತಕಗಳೂ ಅತ್ಯುತ್ತಮವಾಗಿವೆ ಅನ್ನೋದನ್ನು ಆ ಯುವಸಮೂಹಕ್ಕೆ ತಿಳಿಸುವುದರಲ್ಲಿ ನಾವು ಸೋತಿದ್ದೇವೆ.

ಇಂಗ್ಲಿಷ್ ಶ್ರೇಷ್ಠ ಎಂಬ ವ್ಯಸನ ಹುಟ್ಟಲು ಕಾರಣ ನಾವು ಮತ್ತು ನಮ್ಮ ಕೀಳರಿಮೆ ಮಾತ್ರ! ಆದ್ದರಿಂದ ಈ ಯುವಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ವ್ಯಾಪಕ ಸಮೀಕ್ಷೆ ಆಗಬೇಕಿದೆ. ಅವರು ಓದುತ್ತಿರುವುದೇನು ಎಂಬ ಓದುಮಿಡಿತವನ್ನು ಅರಿತು ಕನ್ನಡದಲ್ಲೂ ಅಂತಹ ಸಾಹಿತ್ಯ ಕೃಷಿಯಾಗಬೇಕಿದೆ. ಜೊತೆಗೆ, ಕನ್ನಡಕ್ಕೆ ಸಂಬಂಧಿಸಿದ ಪ್ರತಿ ವಿಷಯದಲ್ಲಿಯೂ ಯುವಸಮೂಹ ಅತ್ಯಂತ ಪ್ರೀತಿಯನ್ನು ಇಟ್ಟುಕೊಂಡಿದೆ. ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳಬೇಕಿದೆ. ಪುಸ್ತಕ ಲೋಕಾರ್ಪಣೆಗಳಿಗೆ, ಪುಸ್ತಕ ಸಂತೆ, ಮೇಳಗಳಿಗೆ, ಸಂವಾದಗಳಿಗೆ ಅವರುಗಳನ್ನು ಸಹಭಾಗಿಗಳನ್ನಾಗಿಸಿಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net