

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವ್ಯಕ್ತಿ ಸ್ವಾತಂತ್ರೃ ಹರಣವಾಗುತ್ತಿದೆ. ಅಧ್ಯಾಪಕರು ಮತ್ತು ಅಧ್ಯಾಪಕರ ಸಂಘ ಇದನ್ನು ಧೈರ್ಯವಾಗಿ ಖಂಡಿಸಬೇಕು ಎಂದು ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎಸ್.ಪೂರ್ಣಾನಂದ ಹೇಳಿದರು
ಕುವೆಂಪು ವಿವಿ ಅಧ್ಯಾಪಕರ ಸಂಘ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವರು ನಿವೃತ್ತ ಪ್ರಾಧ್ಯಾಪಕರನ್ನು ಬೀಳ್ಕೊಟ್ಟು ಮಾತನಾಡಿದ ಅವರು, ವಿವಿಗಳ ಸ್ವಾಯತ್ತತೆಯನ್ನು ಕಸಿದುಕೊಂಡು ಏಕರೂಪದ ಪಠ್ಯಕ್ರಮ ರಚಿಸಲು ಸರ್ಕಾರ ಮುಂದಾಗಿದೆ. ಶೈಕ್ಷಣಿಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕ್ರಮಗಳನ್ನು ಮುಲಾಜಿಲ್ಲದೆ ಅಧ್ಯಾಪಕರು ಖಂಡಿಸಬೇಕು ಎಂದರು.
ಸರ್ಕಾರವು ವಿವಿಗಳ ಬೋಧಕ ಸಿಬ್ಬಂದಿ ನೇಮಕಾತಿಯನ್ನು ಕೇಂದ್ರಿಕೃತವಾಗಿ ನಡೆಸಲು ಮುಂದಾದಾಗ ವಿವಿಯ ಅಧ್ಯಾಪಕರ ಸಂಘ ಖಂಡಿಸಿತ್ತು. ಸಂಶೋಧನಾ ಲೇಖನ ಬರೆದಿದ್ದಕ್ಕೆ ಅಶೋಕ ವಿವಿಯ ಪ್ರಾಧ್ಯಾಪಕರೊಬ್ಬರನ್ನು ವಜಾ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪ್ರಾಧ್ಯಾಪಕರು ಒಗ್ಗಟ್ಟು ಪ್ರದರ್ಶಿಸಿದರು. ಶೈಕ್ಷಣಿಕ ಮತ್ತು ಉತ್ತಮ ಸಂಶೋಧನಾ ಚಟುವಟಿಕೆ ಜತೆಗೆ ಈ ಕ್ಷೇತ್ರದಲ್ಲಿನ ವಿಪತ್ತುಗಳಿಗೆ ಪ್ರತಿಕ್ರಿಯಿಸುವ, ಸ್ಪಂದಿಸುವ ಕರ್ತವ್ಯವನ್ನು ಅಧ್ಯಾಪಕರು ಮರೆಯಬಾರದು ಎಂದು ಹೇಳಿದರು.
ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಪ್ರಾಧ್ಯಾಪಕರಿಗೆ ಸಾಕಷ್ಟು ಅಡ್ಡಿಗಳು ಎದುರಾಗುತ್ತವೆ. ಮುಕ್ತ ಸಂಶೋಧನಾ ವಾತಾವರಣ ನಿರ್ಮಿಸಿದಲ್ಲಿ ಮಾತ್ರ ಗುಣಮಟ್ಟದ ಸಂಶೋಧನೆ ಕೈಗೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.
ನಿವೃತ್ತರಾದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ.ರಾಮೇಗೌಡ, ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ.ರಿಯಾಜ್ ಮೊಹಮ್ಮದ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಸ್.ಬಿರಾದಾರ್ ಅವರನ್ನು ಬೀಳ್ಕೊಡಲಾಯಿತು.
ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಹಿರೇಮಣಿ ನಾಯ್ಕ, ಕಾರ್ಯದರ್ಶಿ ಡಾ.ಬಿ.ಜೆ.ಗಿರೀಶ್, ಡಾ.ಗಜಾನನ ಪ್ರಭು ಮುಂತಾದವರಿದ್ದರು.