

ಬೆಂಗಳೂರು: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ದೊರೆಯುವಂತಾಗಲು ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿ ಮಾಡಿದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿಪಿಎಂಜೆಎವೈ) ಅನುದಾನದ ಗೊಂದಲದಿಂದ ರಾಜ್ಯದಲ್ಲಿ ಈವರೆಗೂ ಜಾರಿಯಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಎಬಿಪಿಎಂಜೆಎ ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿದೆ.
ಇದರನ್ವಯ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ 70 ವರ್ಷಗಳು ಮೇಲ್ಪಟ್ಟವರು ಸೇರಿ ಎಲ್ಲ ವಯೋಮಾನದವರಿಗೆ ಒಟ್ಟು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚದ ಶೇ.30 ಪಾವತಿಸಲಾಗುತ್ತಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಸುವರ್ಣ ಆರೋಗ್ಯಸುರಕ್ಷಾ ಟ್ರಸ್ಟ್ (ಸಾಸ್ಟ್) ನಿರ್ವಹಣೆ ಮಾಡುತ್ತಿದ್ದು, ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬದ 70 ವರ್ಷ ಮೇಲಟ್ಟ ಸದಸ್ಯರಿಗೆ, 2023-24ನೇ ಸಾಲಿನಲ್ಲಿ ಒಟ್ಟು 169 ಕೋಟಿ ರೂ. ಚಿಕಿತ್ಸಾ ವೆಚ್ಚವನ್ನು ಈ ಯೋಜನೆಯಡಿ ಭರಿಸಲಾಗಿದೆ. ಆದರೆ, ಕೇಂದ್ರ ಸರ್ಕಾರವು ಕಳೆದ ಅಕ್ಟೋಬರ್ನಿಂದ ಎಬಿಪಿಎಂಜೆಎವೈ ಅಡಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದೆ.
ದಕ್ಷಿಣ ಭಾರತದ ಎಲ್ಲಿಯೂ ಈ ಯೋಜನೆ ಅನುಷ್ಠಾನವಾಗಿಲ್ಲ. ಎಬಿಪಿಎಂಜೆಎವೈ ಅನ್ವಯ ಶೇ.60 ಕೇಂದ್ರ, ಉಳಿದಿದ್ದನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಆದರೆ, ರಾಜ್ಯದಲ್ಲಿ ಅನುಷ್ಠಾನವಾಗಿರುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ.25 ಭರಿಸುತ್ತಿದ್ದು, ಉಳಿದ ಶೇ. 75 ಅನ್ನು ರಾಜ್ಯದ ಹೊಣೆಯಾಗಿದೆ. ಯೋಜನೆಗೆ ಕೇಂದ್ರ ಸರ್ಕಾರದ ಹೆಸರಾದರೆ ಹೆಚ್ಚಿನ ಹಣ ಪಾವತಿ ರಾಜ್ಯ ಸರ್ಕಾರದ್ದು ಎಂದಾಗಬಾರದು. | ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಎಬಿಪಿಎಂಜೆಎವೈನಲ್ಲಿ ನಿಗದಿತ ಅನುದಾನದ ಕುರಿತು ಖಚಿತತೆ ಇಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ ಕಳೆದ ನ. 27ರಂದು ಕೇಂದ್ರಕ್ಕೆ ಪತ್ರ ಬರೆದಿತ್ತು. ಈವರೆಗೂ ಉತ್ತರ ಬಂದಿಲ್ಲದ ಕಾರಣ ರಾಜ್ಯದಲ್ಲಿ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಹೀಗಾಗಿ 70 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯ ಉಪಯೋಗ ದೊರೆಯದಂತಾಗಿದೆ.