ಕೆಎಫ್‌ಡಿ ಬಾಧಿತ ಎಪಿಎಲ್ ಕುಟುಂಬಕ್ಕೂ ಉಚಿತ ಚಿಕಿತ್ಸೆ

Kyasanur Forest Disease
Published on

ಶಿವಮೊಗ್ಗ: ಕೆಎಫ್‌ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಬಾಧಿತ ಬಿಪಿಎಲ್ ಕುಟುಂಬಗಳಿಗೆ ಸಿಗುತ್ತಿದ್ದ ಉಚಿತ ಚಿಕಿತ್ಸೆ ಇನ್ಮುಂದೆ ಎಪಿಎಲ್ ಕುಟುಂಬ ಸದಸ್ಯರಿಗೂ ರಾಜ್ಯದ ಎಸ್‌ಎಎಸ್‌ಟಿ(ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಅಡಿ ನೋಂದಾಯಿತ ಆಸ್ಪತ್ರೆಯಲ್ಲಿ ದೊರೆಯಲಿದೆ.

ಮಲೆನಾಡಿನ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ನಿರ್ಧಾರದಿಂದ ನೆರವಾಗಲಿದೆ. ಸಾಕಷ್ಟು ಕೆಎಫ್‌ಡಿ ಬಾಧಿತರು ಉಚಿತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದರು. ಅದನ್ನು ಮನಗಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯುಷ್ಮಾನ್ ಭಾರತ್(ಎಬಿ ಪಿಎಂಜೆಎವೈ ಎಆರ್‌ಕೆ) ಯೋಜನೆ ಅಡಿ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಿ ಆದೇಶಿಸಿದೆ.

2003ರಿಂದ ಈವರೆಗೆ 59 ಜನರು ಕೆಎಫ್‌ಡಿಯಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನ ಮಣಿಪಾಲ ಆಸ್ಪತ್ರೆಯನ್ನು ಆಶ್ರಯಿಸಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಎಪಿಎಲ್ ಕುಟುಂಬದವರಿಗೆ ಹೊರೆಯಾಗುತ್ತಿತ್ತು. ಸಣ್ಣಪುಟ್ಟ ಎಕ್ಸ್‌ರೇ, ಡಯಾಲೀಸಿಸ್ ಮಾಡಿಸಲು ಸಾವಿರಾರು ರೂ. ವ್ಯಯ ಮಾಡಬೇಕಿತ್ತು. ಈ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳು ನಡೆದ ಬಳಿಕ ಆರೋಗ್ಯ ಇಲಾಖೆ ಜಾಗೃತಗೊಂಡು ಲಸಿಕಾಕರಣ ಸೇರಿ ಆಯುಷ್ಮಾನ್ ಭಾರತ್ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಿತ್ತು. ಇದೀಗ ಎಪಿಎಲ್ ಕುಟುಂಬಗಳಿಗೂ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net