ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ksrtc
Published on
ಬೆಂಗಳೂರು: ಪರೀಕ್ಷೆ ಬರೆಯಲು ತೆರಳುವ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳು ಹಿಂದಿನ ಸ್ಮಾರ್ಟ್‌ಕಾರ್ಡ್ ಪಾಸ್ ಮತ್ತು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಲಾಕ್‌ಡೌನ್‌ನಿಂದಾಗಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆ ಪರೀಕ್ಷೆಗಳನ್ನು ಇದೀಗ ನಡೆಸಲಾಗುತ್ತಿದ್ದು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ   ದಿನಸಿ ಕಿಟ್ ವಿತರಣೆ
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 25ರಿಂದ ಜುಲೈ 4ರವರೆಗೆ ನಿಗದಿಯಾಗಿದ್ದು, ಪರೀಕ್ಷೆಯ ದಿನ ವಿದ್ಯಾರ್ಥಿಗಳು ವಾಸಸ್ಥಳದಿಂದ ಪರೀಕ್ಷಾ ಕ್ಷೇಂದ್ರಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ನಿಗಮದ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ನಿರ್ವಾಹಕರಿಗೆ ಪರೀಕ್ಷಾ ಪ್ರವೇಶ ಪತ್ರ ಅಥವಾ ಪ್ರಸ್ತುತ ಸಾಲಿನ ವಿದ್ಯಾರ್ಥಿ ಸ್ಮಾರ್ಟ್‌ಕಾರ್ಡ್ ಪಾಸ್ ತೋರಿಸಬೇಕು. ಇನ್ನು ಜೂನ್ 18ರಂದು ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ಅಂದು ಸಹ ವಿದ್ಯಾರ್ಥಿಗಳು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಗುರುವಾರ ವಿಧಾನಸೌಧದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಈ ಕುರಿತು ವಿಚಾರ ವಿನಿಮಯ ನಡೆಸಿದರು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ತಮ್ಮ ಇಲಾಖೆಯ ಅಪೇಕ್ಷೆಯನ್ನು ಸಭೆಯ ಗಮನಕ್ಕೆ ತಂದರು.
ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆದೇಶ ಹೊರಡಿಸಬೇಕು. ಗಡಿ ರಾಜ್ಯದಿಂದ ಬರುವ ಮಕ್ಕಳು ಪರೀಕ್ಷೆಗೆ ಬಂದು ಹೋಗಲು ಅನುವಾಗುವಂತೆ ಗಡಿ ಭಾಗದಿಂದ ಪರೀಕ್ಷಾ ಕೇಂದ್ರದವರೆಗೆ ಬಸ್ ಸೌಲಭ್ಯದ ಅಗತ್ಯವಿದ್ದರೆ ಅದನ್ನೂ ಪೂರೈಸಲಾಗುವುದು ಎಂದು ಸವದಿ ಅಭಯ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net