ಮಹಿಳೆಯರಿಗಿಲ್ಲ ರಾತ್ರಿ ಪಾಳಿ, ಹೆಚ್ಚಿನ ಅವಧಿ ದುಡಿಸಿಕೊಂಡರೆ ಉಚಿತ ಸಾರಿಗೆ ನೀಡಬೇಕು: ಜಾರಿಯಾಯ್ತು ಯೋಗಿ ಸರ್ಕಾರದ ಹೊಸ ರೂಲ್ಸ್​

Yogi
Published on

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 2ನೇ ಬಾರಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್​​ ಮಹಿಳೆಯರ ರಕ್ಷಣೆಗಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಉತ್ತಮ ವಾತಾವರಣ ಕಲ್ಪಿಸುವುದು ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

ಕಾರ್ಖಾನೆಗಳಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಇನ್ನು ಮುಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸುವಂತಿಲ್ಲ, ರಾತ್ರಿ 7 ಗಂಟೆಯ ನಂತರ ಕೆಲಸ ಮಾಡಿಸಿದರೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ನೀಡಬೇಕು ಎಂದು ಕಾರ್ಖಾನೆಗಳಿಗೆ ಸೂಚಿಸಿದ್ದಾರೆ.

ತೀರಾ ಅಗತ್ಯ ಸಂದರ್ಭದಲ್ಲಷ್ಟೇ ರಾತ್ರಿ ಪಾಳಿಗೆ ಅವಕಾಶವಿದ್ದು, ಆಕೆಯ ಒಪ್ಪಿಗೆ ಇದ್ದರೆ ಮಾತ್ರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಳ್ಳಬಹುದು. ಅದು ಬರವಣಿಗೆ ರೂಪದಲ್ಲಿಯೇ ಇರಬೇಕು. ಇನ್ನೂ ಬೆಳಗ್ಗೆ 6 ಗಂಟೆ ಮುನ್ನ ಹಾಗೂ ಸಂಜೆ 7 ಗಂಟೆ ನಂತರ ದುಡಿಸಿಕೊಂಡರೆ ಉಚಿತ ಸಾರಿಗೆಯನ್ನು ಸಂಸ್ಥೆಯೇ ನೀಡಬೇಕೆಂದು ಹೇಳಿದ್ದಾರೆ. ಅಲ್ಲದೇ ಹೆಚ್ಚಿನ ಸಮಯ ಕೆಲಸ ಮಾಡಿಸಿಕೊಂಡಲ್ಲಿ ಊಟದ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂದು ತಾಕೀತು ಮಾಡಿದ್ದಾರೆ.

ಶನಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಈ ಆದೇಶ ಹೊರಡಿಸಿದ ಬೆನ್ನಲ್ಲೇ, ರಾಜ್ಯ ಕಾರ್ಮಿಕ ಸಚಿವಾಲಯ ಈ ನಿಯಮವನ್ನು ಈಗಾಗಲೇ ಜಾರಿಗೊಳಿಸಿದೆ.

ಅಲ್ಲದೇ ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಾವುದೇ ರೀತಿಯ ದೌರ್ಜನ್ಯ ನಡೆದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net