ಜಿಲ್ಲೆಯಲ್ಲಿ ರೈತರಿಗೆ ತೆಂಗಿನಸಸಿ ಉಚಿತ ವಿತರಣೆ: ಬೆಳೆ ಪ್ರದೇಶ ವಿಸ್ತರಣೆಗೆ ಯೋಜನೆಗೆ ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ

Free distribution of coconuts to farmers mandya
Published on

ಮಂಡ್ಯ: ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ತೆಂಗು ಬೆಳೆ ಪ್ರದೇಶ ವಿಸ್ತರಣೆಗೆಂದು ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ರೈತರಿಗೆ ಉಚಿತವಾಗಿ ತೆಂಗಿನ ಸಸಿ ವಿತರಣೆ ಮಾಡಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದಿರುವ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ತೆಂಗಿನ ಸಸಿ ವಿತರಣೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ ರೈತರು ತಮ್ಮ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಸಸಿ ನೆಡಲು ಅವಕಾಶ ನೀಡಲಾಗಿದೆ.

ಏನಿದು ಯೋಜನೆ?: ಜಿಲ್ಲೆಯಲ್ಲಿ ತೆಂಗು ಬೆಳೆ ಪ್ರದೇಶ ವಿಸ್ತರಣೆ ಮಾಡಲು ಕ್ರಮ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಇಲಾಖಾ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಇದಕ್ಕೆಂದು ಕೆಲ ನಿಯಮ ವಿಧಿಸಲಾಗಿದೆ.

ಅದರಂತೆ ಇಲಾಖೆ ನೀಡಲಾಗುವ ತೆಂಗಿನ ಸಸಿಗಳನ್ನು ರೈತರು ತಮ್ಮ ಜಮೀನಿನಲ್ಲಿ ಕಡ್ಡಾಯವಾಗಿ ನೆಡಬೇಕು. ಈ ಕಾರ್ಯಕ್ರಮದಡಿ ಕನಿಷ್ಟ 0.20 ಗುಂಟೆಯಿಂದ ಗರಿಷ್ಟ 1 ಹೆಕ್ಟೇರ್‌ವರೆಗೆ ತೆಂಗು ಬೆಳೆ ಪ್ರದೇಶ ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. ಅಂದರೆ ಗರಿಷ್ಟ 123 ಸಸಿಗಳನ್ನು ವಿತರಣೆ ಮಾಡಲಾಗುವುದು. ಇವು ಸುಮಾರು ಒಂದೂವರೆ ವರ್ಷದ ಸಸಿಗಳಾಗಿವೆ.

ಸೌಲಭ್ಯಕ್ಕೆ ದಾಖಲೆ ಅವಶ್ಯಕ: ಯೋಜನೆಯಡಿ ಸಸಿಗಳನ್ನು ಪಡೆಯಬೇಕಾದರೆ ಕೆಲ ದಾಖಲೆಗಳನ್ನು ರೈತರು ಒದಗಿಸಬೇಕು. ಅದರಂತೆ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ, ಪಾಸ್‌ಪೋರ್ಟ್ ಅಳತೆಯ ಫೋಟೋ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಾಗಿದ್ದಾರೆ ಜಾತಿ ದೃಢೀಕರಣ ಪತ್ರವನ್ನು ಕೊಡಬೇಕಿದೆ. ಆಸಕ್ತರ ರೈತರು ತಾಲೂಕು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅರ್ಜಿ ಪಡೆದು ನ.4ರೊಳಗೆ ಸಲ್ಲಿಸಬಹುದು.

ಪ್ರಮುಖ ಅಂಶವೆಂದರೆ ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ರೈತರು, ತೆಂಗಿನ ಬೆಳೆ ಪ್ರದೇಶ ವಿಸ್ತರಣೆಗೆ ಇತರೆ ಯೋಜನೆ ಹಾಗೂ ಇತರೆ ಇಲಾಖೆಯಲ್ಲಿ ಯಾವುದೇ ಸಹಾಯಧನ ಪಡೆದಿರಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net