

ಶಿವಮೊಗ್ಗ: ಶಿವಮೊಗ್ಗದ ಭಾರತೀಯ ದಂತ ವೈದ್ಯಕೀಯ ಸಂಘ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಶ್ರಯದಲ್ಲಿ ತಾಲೂಕಿನ 25 ಸರ್ಕಾರಿ ಶಾಲೆಗಳಲ್ಲಿ ದಂತ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಆ.2ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಬಿ.ಎಂ.ಗೌತಮ್ ಹೇಳಿದರು.
ಸಂಘದ ರಜತ ಮಹೋತ್ಸವದ ಸಂದರ್ಭದಲ್ಲಿ ಹಲ್ಲುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತ ತಪಾಸಣೆ ಮತ್ತು ಮಾಹಿತಿ ನೀಡಲಾಗುವುದು. ಅಲ್ಲದೆ ಉಚಿತವಾಗಿ ಟೂತ್ ಬ್ರಶ್ ಮತ್ತು ಪೇಸ್ಟ್ ವಿತರಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.1ರಂದು ಬೆಳಗ್ಗೆ 10.30ಕ್ಕೆ ಕೆ.ಆರ್.ಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಬಿಇಒ ಎನ್.ರಮೇಶ್ ಉಪಸ್ಥಿತರಿರುವರು. ಆ.2ರಿಂದ ಏಕಕಾಲಕ್ಕೆ ನಮ್ಮ ವೈದ್ಯರು 25 ಶಾಲೆಗಳಲ್ಲಿ ತಪಾಸಣೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 8.30ಕ್ಕೆ ಶಾಲೆಗಳಿಗೆ ವೈದ್ಯರು ಆಗಮಿಸಲಿದ್ದು, ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಈಗಾಗಲೇ ಮಾಹಿತಿ ತಿಳಿಸಲಾಗಿದೆ ಎಂದರು. ಡಾ. ವಿಕ್ರಮ ಎಸ್. ಕೆದ್ಲಾಯ, ಡಾ. ಎನ್.ಸತೀಶ್ಚಂದ್ರ, ಡಾ. ಸಾದ್ವಿಕ್, ಡಾ. ಸುರೇಶ್, ಡಾ. ಹೇಮಾ, ಡಾ. ರವಿಕಿರಣ್, ಡಾ. ವೀರೇಶ್, ಡಾ. ಜಯವದನ್ ಸುದ್ದಿಗೋಷ್ಠಿಯಲ್ಲಿದ್ದರು.