

ಬೆಂಗಳೂರು: "ನಾನು ಮಾಜಿ ಉಪಮುಖ್ಯಮಮಂತ್ರಿ ಡಾ. ಜಿ.ಪರಮೇಶ್ವರ ಅವರ ಅಣ್ಣನ ಮಗಳು. ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ಕೊಡಿಸುತ್ತೇನೆ...'' ಎಂದವಳ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.
ಪ್ರೀತಿಯ ಬಲೆ ಬೀಸಿದ್ದಲ್ಲದೆ, ಮದುವೆ ಆಗದಿದ್ದರೆ ರೇಪ್ ಕೇಸ್ ಹಾಕೋದಾಕಿ ಬೆದರಿಕೆಯನ್ನೂ ಒಡ್ಡಿದ್ದಾಳೆ. ಅಷ್ಟೇ ಅಲ್ಲ, ಸಾಲ ಕೊಡಿಸುವುದಾಗಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾಳೆ. ಯುವಕನೊಬ್ಬ ಆಕೆಯನ್ನು ತುಮಕೂರಿಗೆ ಕರೆದೊಯ್ದು ಡಾ.ಜಿ. ಪರಮೇಶ್ವರ್ರ ಮುಂದೆ ಮುಖತಃ ಭೇಟಿ ಮಾಡಿಸಿದಾಗ ಬಯಲಾಯ್ತು ವಂಚಕಿಯ ಅಸಲಿ ಮುಖ!
ಡಾ. ಜಿ.ಪರಮೇಶ್ವರ್ರ ಅಣ್ಣನ ಮಗಳ ಸೋಗಿನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಜ್ಞಾನಗಂಗಾ ಲೇಔಟ್ ನಿವಾಸಿ ಪಲ್ಲವಿ (32) ಪೊಲೀಸರ ಅಥಿತಿಯಾಗಿದ್ದಾಳೆ. ಆರೋಪಿತೆ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಆಕೆಯಿಂದ ವಂಚನೆಗೊಳಗಾದವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮೇ 30ರ ಬಳಿಕ ಆಗಾಗ್ಗೆ ಬಾಡಿಗೆಗೆ ಯೇಗೇಶ್ ಕಾರನ್ನು ಪಲ್ಲವಿ ಕರೆಸಿಕೊಂಡಿದ್ದಳು. ನೆಲಮಂಗಲದಲ್ಲಿ ಆಸ್ತಿ ಇದೆ. ಮೈಸೂರು, ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ ಎಂದು ಹೇಳಿಕೊಂಡು, ಅ.22ರವರೆಗೆ 40 ಸಾವಿರ ಕಿ.ಮೀ. ಸುತ್ತಾಡಿಸಿದ್ದಳು. 4.30 ಲಕ್ಷ ರೂ. ಬಾಡಿಗೆಯಾಗಿತ್ತು. ಕಾರು ಸರ್ವೀಸ್ ಮಾಡಿಸಲು 21 ಸಾವಿರ ರೂ. ಕೊಟ್ಟಿದ್ದು, ಬಾಕಿ ಹಣ ಕೇಳಿದಾಗ ಸಬೂಬು ಹೇಳತೊಡಗಿದ್ದಳು. ಇದಾದ ಕೆಲ ದಿನಗಳ ಬಳಿಕ, 'ನೀನಂದ್ರೆ ನನಗೆ ತುಂಬಾ ಇಷ್ಟ. ನಿನ್ನನ್ನು ಪ್ರೀತಿಸುತ್ತೇನೆ' ಎಂದು ಯೋಗೇಶ್ಗೆ ಸಂದೇಶ ಕಳುಹಿಸಿದ್ದಳು. ಇದಕ್ಕೆ ಯೋಗೇಶ್ ನಿರಾಕರಿಸಿದಾಗ ಒಮ್ಮೆ ಯೋಚಿಸಿ ತಿಳಿಸುವಂತೆ ಹೇಳಿದ್ದಳು.
ಕಂಟ್ರೋಲ್ ರೂಂಗೆ ಕಿಡ್ನ್ಯಾಪ್ ದೂರು: ಪೊಲೀಸ್ ಠಾಣೆಗೆ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಕಾರಿನಿಂದ ಇಳಿದಿದ್ದ ಪಲ್ಲವಿ, ಯೋಗೇಶ್ ಎಂಬಾತ ತನ್ನನ್ನು ಅಪಹರಿಸಿದ್ದಾನೆ ಎಂದು ನಿಯಂತ್ರಣ ಕೊಠಡಿಗೆ ದೂರು ಮುಟ್ಟಿಸಿದ್ದಳು. ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಆಧರಿಸಿ ಕೆಂಗೇರಿ ಪೊಲೀಸರು ಯೋಗೇಶ್ಗೆ ಕರೆ ಮಾಡಿ, "ಪಲ್ಲವಿಯನ್ನು ಅಪಹರಿಸಿರುವ ಬಗ್ಗೆ ದೂರು ಬಂದಿದೆ. ಆಕೆಯನ್ನು ಕೂಡಲೇ ತಂದು ಬಿಡಿ' ಎಂದು ಎಚ್ಚರಿಸಿದ್ದರು. ಆಗ ಯೋಗೇಶ್ ನಡೆದ ವಿಚಾರವನ್ನು ವಿವರಿಸಿ ಪಲ್ಲವಿಯನ್ನು ಕೆಂಗೇರಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಆಕೆಯನ್ನು ನಮ್ಮ ಠಾಣೆಗೆ ಹಸ್ತಾಂತರಿಸಿದ್ದಾರೆ. ಪಲ್ಲವಿಗೆ ಮದುವೆಯಾಗಿದ್ದು ಪತಿಯಿಂದ ದೂರ ಇದ್ದಾಳೆ. ಮತ್ತೋರ್ವನ ಜತೆ ಸಲುಗೆ ಬೆಳೆಸಿ, ಮದುವೆಯಾಗಿ 8 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸುವುದಾಗಿ, ಸಬ್ಸಿಡಿ ಸಾಲ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವುದು ಈವರೆಗಿನ ವಿಚಾರಣೆಯಿಂದ ಗೊತ್ತಾಗಿದೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.