

ನವದೆಹಲಿ: ಭಾರತದಲ್ಲಿ ಭೂಮಿಯಿಂದ ಆಕಾಶದವರೆಗೆ ಮೇವು, 2ಜಿ ಸೇರಿದಂತೆ ಕೋಟಿ ಕೋಟಿ ಹಣ ನುಂಗಿ ನೀರು ಕುಡಿದ ಹಗರಣಗಳು ನಡೆದಿದ್ದನ್ನು ನೋಡಿದ್ದೇವೆ. ಆದರೆ ಭ್ರಷ್ಟಾಚಾರ ಕಡಿಮೆ ಎನ್ನುವ ಅಮೆರಿಕಾದಲ್ಲೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿದಂತೆ ಕಾಗದದಲ್ಲಿ ತೋರಿಸಿ 1.5 ಮಿಲಿಯನ್ ಡಾಲರ್ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಗರಣದ ರೂವಾರಿ ಮಹಿಳೆಗೆ ಅಲ್ಲಿನ ನ್ಯಾಯಾಲಯ ತಪ್ಪಿತಸ್ಥೆಯೆಂದು ಪರಿಗಣಿಸಿ 9 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಮೆರಿಕಾದ ಇಲಿನಾಯ್ಸ್ ರಾಜ್ಯದ ಹಾರ್ವೆ ಸ್ಕೂಲ್ ಡಿಸ್ಟ್ರಿಕ್ಟ್ ಫುಡ್ ಸರ್ವಿಸಸ್ ಡಿಪಾರ್ಟ್ ಮೆಂಟ್ ನಲ್ಲಿ ಭಾರಿ ಹಗರಣ ಬೆಳಕಿಗೆ ಬಂದಿದೆ. ಹಾರ್ವೆ ಸ್ಕೂಲ್ ಡಿಸ್ಟ್ರಿಕ್ಟ್ನ ಆಹಾರ ಸೇವಾ ಇಲಾಖೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಚಿಕನ್ ನೀಡದೆಯೇ ಆಹಾರ ಸೇವೆಗಳ ವಿಭಾಗದ ಮಹಿಳಾ ಉದ್ಯೋಗಿ ವೆರಾಲಿಡೆಲ್ ಚಿಕನ್ ನೀಡಿದಂತೆ ದಾಖಲೆ ಸೃಷ್ಟಿಸಿ 1.5ಮಿಲಿಯನ್ ಡಾಲರ್ ಅಂದರೆ 12.5 ಕೋಟಿ ಹಣ ಲಪಟಾಯಿಸಿದ್ದದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ನ್ಯಾಯಾಲಯ ವೆರಾಲಿಡೆಲ್ ಗೆ 9 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಚಿಕನ್ ಅನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾಳೆ. ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
2020ರ ಜುಲೈನಿಂದ ಫೆಬ್ರವರಿ 2022 ರವರೆಗೆ ಅವ್ಯವಹಾರ ನಡೆದಿದೆ. ಕೋಳಿ ಮಾಂಸವನ್ನು ತರಿಸಿದರೂ ಬಳಿಕ ಆಕೆ ಮಕ್ಕಳಿಗೆ ವಿತರಿಸದೆ ಕಳ್ಳಮಾರ್ಗದಲ್ಲಿ ಬೇರೆ ಕಡೆ ಮಾರಾಟ ಮಾಡಿಸಿದ್ದಳು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಕಳೆದ ವರ್ಷ ವೆರಾ ಲಿಡೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಕೆ ತಪ್ಪಿತಸ್ಥಳೆಂದು ಸಾಬೀತಾಗಿ 9 ವರ್ಷಗಳ ಶಿಕ್ಷೆ ವಿಧಿಸಲಾಯಿತು.