

ಬೆಂಗಳೂರು: ಟೆಲಿಗ್ರಾಮ್‌ನಲ್ಲಿ ರೀಲ್ಸ್ ನೋಡುವಾಗ ಬಂದ ಜಾಹೀರಾತು ಲಿಂಕ್ ಮೇಲೆ ಕ್ಲಿಕ್ ಮಾಡಿ 11.70 ಲಕ್ಷ ರೂ. ಹೂಡಿಕೆ ಮಾಡಿ ಗೃಹಿಣಿ ಮೋಸಕ್ಕೆ ಒಳಗಾಗಿದ್ದಾರೆ.
ಕಾಡುಗೋಡಿ ನಿವಾಸಿ ಶ್ರೀಕಲಾ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಗಳು ಮಾಹಿತಿ ನೀಡಿದ್ದಾರೆ.
ಟೆಲಿಗ್ರಾಮ್‌ನಲ್ಲಿ ರೀಲ್ಸ್ ನೋಡುವಾಗ ಜಾಹೀರಾತುನಲ್ಲಿ ಲಿಂಕ್ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ವಿಡಿಯೋ ಓಪನ್ ಆಗಿದ್ದು, ಲೈಕ್ ಮಾಡಿ ಅದರ ಸ್ಕ್ರೀನ್ ಶಾಟ್‌ನ್ನು ಟೆಲಿಗ್ರಾಮ್‌ನಲ್ಲಿ ಕಳುಹಿಸಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿದ್ದರು. ಅಲ್ಲದೆ, ಮನೆಯಲ್ಲಿಯೇ ಕುಳಿತು ಕೈತುಂಬ ಹಣ ಸಂಪಾದನೆ ಮಾಡಲು ಅವಕಾಶವಿದೆ ಎಂದು ಆಸೆ ಹುಟ್ಟಿಸಿದ್ದರು.
ಇದನ್ನು ಗಮನಿಸಿದ ಶ್ರೀಕಲಾ,ವಿಡಿಯೋ ಲೈಕ್ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ ಹಣ ಗಳಿಸುತ್ತಿದ್ದರು. ಜತೆಗೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕಮಿಷನ್ ಸಿಗಲಿದೆ ಎಂದು ಮತ್ತೊಂದು ಆಮಿಷವೊಡ್ಡಿದ್ದ ಸೈಬರ್ ಕಳ್ಳರು, ಗೃಹಿಣಿಗೆ ಗಾಳ ಬೀಸಿದ್ದರು. ಆಮಿಷಕ್ಕೆ ಒಳಗಾದ ಗೃಹಿಣಿ, ಕಳ್ಳರು ಕೊಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ 1 ಸಾವಿರ ರೂ. ಹೂಡಿಕೆ ಮಾಡಿದ್ದರು. ಕೆಲವೇ ತಾಸಿನಲ್ಲಿ 1300 ರೂ. ಅನ್ನು ಲಾಭಾಂಶ ಎಂದು ಗೃಹಿಣಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಹೆಚ್ಚು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ನಂಬಿದ ಗೃಹಿಣಿ, ಆರೋಪಿಗಳು ಕೊಟ್ಟ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ಜಮೆ ಮಾಡಿದ್ದಾರೆ. ಒಟ್ಟಾರೆ 11.84 ಲಕ್ಷ ರೂ. ಹೂಡಿಕೆ ಮಾಡಿದ್ದು, ಕಮಿಷನ್ ರೂಪದಲ್ಲಿ 12 ಸಾವಿರ ರೂ. ಮಾತ್ರ ಗೃಹಿಣಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಆನಂತರ ಕಮಿಷನ್ ಬಂದಿಲ್ಲ. ಭಯಗೊಂಡು ಹೂಡಿಕೆ ಹಣವನ್ನು ವಿತ್ ಡ್ರಾ ಮಾಡಲು ಹೋದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಲು ೆನ್ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಅರೆಕಾಲಿನ ನೌಕರಿ ಆಸೆ ಹುಟ್ಟಿಸಿ ಮೋಸ ಮಾಡಿರುವುದು ಗೊತ್ತಾಗಿ ಈ ಬಗ್ಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.