

ಬೆಂಗಳೂರು: ದುಬಾರಿ ಬೆಲೆಯ ಮೊಬೈಲ್, ಕಾರು ಇನ್ನಿತರ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಜಾಹೀರಾತು ಪ್ರಕಟಿಸಿ ಜನರನ್ನು ಸೆಳೆದು ಟೋಪಿ ಹಾಕುವ ವ್ಯವಸ್ಥಿತ ಜಾಲ ಸೃಷ್ಟಿಯಾಗಿದೆ.
‘ಆರ್ವಿು ಪೋಸ್ಟಲ್ ಸರ್ವೀಸ್ ಹಾಗೂ ‘ಆರ್ವಿು ಟ್ರಾನ್ಸ್ಪೋರ್ಟ್ ಸರ್ವೀಸ್’ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಜನರನ್ನು ಯಾಮಾರಿಸಲಾಗುತ್ತಿದೆ. ಫೇಸ್ಬುಕ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳಲ್ಲಿ ನಕಲಿ ವೆಬ್ಸೈಟ್ ಲಿಂಕ್ಗಳನ್ನು ಹರಿಬಿಟ್ಟು ವಂಚಿಸಲಾಗುತ್ತಿದೆ.
ಇಡೀ ದೇಶವೇ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಮೇಜಾನ್, ಫ್ಲಿಪ್ಕಾರ್ಟ್ ಮತ್ತಿತರ ಪ್ರತಿಷ್ಠಿತ ಆನ್ಲೈನ್ ಮಾರ್ಕೆಟ್ ಕಂಪನಿಗಳ ವಹಿವಾಟು ಸ್ಥಗಿತಗೊಂಡಿದೆ. ಅಲ್ಲದೆ, ವಾಣಿಜ್ಯ ಮಳಿಗೆಗಳೂ ಬಂದ್ ಆಗಿವೆ. ಇದರಿಂದಾಗಿ ಮೊಬೈಲ್, ಲ್ಯಾಪ್ಟಾಪ್, ಬಟ್ಟೆ ತೊಳೆಯುವ ಯಂತ್ರ, ಫ್ಯಾನ್ ಇನ್ನಿತರ ವಸ್ತುಗಳಿಗೆ ಬೇಡಿಕೆಯೂ ಹೆಚ್ಚಿದೆ. ಅಗತ್ಯ ವಸ್ತುಗಳು ಹೊರತುಪಡಿಸಿದರೆ, ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅರಿತಿರುವ ಸೈಬರ್ ವಂಚಕರು, ಯೋಧರ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ‘ಆರ್ವಿು ಟ್ರಾನ್ಸ್ಪೋರ್ಟ್ ಸರ್ವೀಸ್’ ಹೆಸರಿನ ವೆಬ್ಸೈಟ್ ಮೂಲಕ ಸಂರ್ಪಸುವ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.
ಸರ್ಕಾರದಿಂದ ಅನುಮತಿ ಇದೆ!: ಲಾಕ್ಡೌನ್ ಇದೆಯಲ್ಲ? ಸರ್ವೀಸ್ ಹೇಗೆ ಕೊಡುತ್ತೀರಿ? ಎಂದು ಪ್ರಶ್ನಿಸುವ ಗ್ರಾಹಕರಿಗೆ, ‘ಆರ್ವಿು ಟ್ರಾನ್ಸ್ಪೋರ್ಟ್ ಸರ್ವೀಸ್ ಹಾಗೂ ಆರ್ವಿು ಪೋಸ್ಟಲ್ ಸರ್ವೀಸ್ ಕೇಂದ್ರ ಸರ್ಕಾರ ಅಧೀನದಲ್ಲಿ ಕೆಲಸ ಮಾಡುತ್ತಿವೆ. ಲಾಕ್ಡೌನ್ ಇರುವುದರಿಂದ ಜನರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ, ಪೋಸ್ಟಲ್ ಮತ್ತು ಟ್ರಾನ್ಸ್ಪೋರ್ಟ್ ಸೇವೆಗೆ ವಿಶೇಷ ಅನುಮತಿ ಕೊಟ್ಟಿದ್ದಾರೆ’ ಎಂದು ಬಿಂಬಿಸುತ್ತಾರೆ. ಇಷ್ಟಾದರೂ ಗ್ರಾಹಕರಿಗೆ ನಂಬಿಕೆ ಬಂದಿಲ್ಲ ಎಂಬುದು ಗೊತ್ತಾದರೆ, ಯೋಧರ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ವಾಟ್ಸ್ಆಪ್ಗೆ ಕಳುಹಿಸಿ ನಂಬಿಸುತ್ತಾರೆ. ಬಳಿಕ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿಸಿಕೊಂಡು ಸಂಪರ್ಕಕ್ಕೆ ಸಿಗುವುದಿಲ್ಲ.
71 ಸಾವಿರ ರೂ. ಧೋಖಾ: ಕೆಂಗೇರಿ ನಿವಾಸಿಯೊಬ್ಬರು, ಫೇಸ್ಬುಕ್ನಲ್ಲಿ ಕಾರು ಮಾರಾಟಕ್ಕಿರುವ ಜಾಹೀರಾತು ಗಮನಿಸಿ, ಅದರಲ್ಲಿನ ಫೊನ್ ನಂಬರ್ ಪಡೆದು ಸಂರ್ಪಸಿದ್ದರು. ಸಿಐಎಸ್ಎಫ್ ಯೋಧ ಕೃಷ್ಣ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ಇಷ್ಟು ದಿನ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಈಗ ಜಮ್ಮು-ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದೇನೆ ಎಂದು ತಿಳಿಸಿದ್ದಾನೆ. ಹೀಗಾಗಿ ಕಾರನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ. ಅನಿವಾರ್ಯ ಕಾರಣಗಳಿಂದ 2 ವರ್ಷದ ಹಿಂದೆ ಖರೀದಿಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು, 1.30 ಲಕ್ಷ ರೂ. ಗೆ ಮಾರಾಟ ಮಾಡುತ್ತಿದ್ದೇನೆ. ಖರೀದಿಗೆ ಒಪ್ಪುವುದಾದರೆ ಆರ್ವಿು ಪೋಸ್ಟಲ್ ಸರ್ವೀಸ್ನವರು ಕಾರನ್ನು ಮನೆ ಬಾಗಿಲಿಗೆ ತಂದು ಬಿಡುತ್ತಾರೆ. ಇಷ್ಟವಾದರೆ ಹಣ ಕೊಡಿ, ಇಲ್ಲವಾದರೆ ಟ್ರಾನ್ಸ್ಪೋರ್ಟ್ ವೆಚ್ಚ ಕೊಡಬೇಕು ಎಂದಿದ್ದಾನೆ. ಅಲ್ಲದೆ, ಸಿಐಎಸ್ಎಫ್ ಯೋಧನ ಗುರುತಿನ ಚೀಟಿಯನ್ನು ವಾಟ್ಸ್ಆಪ್ಗೆ ಕಳುಹಿಸಿ ನಂಬಿಸಿದ್ದ.
ಪೋಸ್ಟಲ್ ಸರ್ವೀಸ್ನಿಂದ ಕರೆ!
ಅನಾಮಿಕನೊಬ್ಬ,‘ಆರ್ವಿು ಪೋಸ್ಟಲ್ ಸರ್ವೀಸ್ನಿಂದ ಕರೆ ಮಾಡುತ್ತಿದ್ದೇನೆ. ಸಿಐಎಸ್ಎಫ್ ಯೋಧ ಕೃಷ್ಣ ಅವರು ನಿಮ್ಮ ಹೆಸರಿಗೆ ಕಾರು ಬುಕ್ ಮಾಡಿದ್ದಾರೆ. ಅದನ್ನು ಡೆಲಿವರಿ ಕೊಡಬೇಕು. ಹಣ ಸಂದಾಯ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಗ್ರಾಹಕ ಕಾರು ಖರೀದಿಗೆ ಒಪ್ಪಿಲ್ಲ ಎಂದಾಗ, ಕೃಷ್ಣ ಅವರ ಒಪ್ಪಿಗೆಯಂತೆ ಕಾರು ನಿಮಗೆ ಡೆಲಿವರಿ ಮಾಡಲು ಪೋಸ್ಟಲ್ ಸರ್ವೀಸ್ನಲ್ಲಿ ನೋಂದಣಿಯಾಗಿದೆ. ಅಲ್ಲದೆ, ನಿಮ್ಮ ಹೆಸರಿನಲ್ಲಿ ರಶೀದಿ ಬರೆದ್ದೇವೆ. ಈಗ ಏಕಾಏಕಿ ನಿಮ್ಮ ನಿರ್ಧಾರವನ್ನು ಬದಲಾಯಿಸುವಂತಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳು ಒಪ್ಪುತ್ತಿಲ್ಲ. ಆನ್ಲೈನ್ ಮೂಲಕ ಹಣ ವರ್ಗಾಯಿಸಿದರೆ, ನೀವು ಸೂಚಿಸುವ ವಿಳಾಸಕ್ಕೆ ಕಾರು ತಂದು ಬಿಡುತ್ತೇವೆ. ದೇಶ ಕಾಯುವ ಯೋಧರ ಮೇಲೆ ಅನುಮಾನ ಪಡುವುದು ಬೇಡ ಎಂದು ಭಾವನಾತ್ಮಕ ಮಾತುಗಳನ್ನಾಡಿದ್ದಾನೆ. ಈ ಮಾತನ್ನು ನಂಬಿದ ಗ್ರಾಹಕ, 71 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಇದಾದ ನಂತರ ಕಾರು ತಂದು ಬಿಡುವುದಾಗಿ ಸಬೂಬು ಹೇಳಿದಾಗ, ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿದೆ.
| ಯಂಕಣ್ಣ ಸಾಗರ್