

ಬೆಂಗಳೂರು: ಬಿಬಿಎಂಪಿ ವತಿಯಿಂದ ಸಬ್ಸಿಡಿ ದರದಲ್ಲಿ ಸೈಟು, ನೌಕರಿ, ಪಿಂಚಣಿ ಕೊಡಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ಕಾಶಿದಾಸ ಲೇಔಟ್‌ನ ದೀಪಕ್ ಅಲಿಯಾಸ್ ಕಿರಣ್ ಮತ್ತು ವಿದ್ಯಾರಣ್ಯಪುರದ ಹರ್ಷ ಅಲಿಯಾಸ್ ಜಗದೀಶ್ ಬಂಧಿತರು. ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಭಾವನ, ಭಾವನಿ ಹಾಗೂ ಸಂಜಯ್ ಪತ್ತೆಗೆ ಬಲೆಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ನಿರುದ್ಯೋಗಿಗಳಾಗಿರುವ ದೀಪಕ್ ಮತ್ತು ಹರ್ಷ, ಮೋಜಿನ ಜೀವನಕ್ಕಾಗಿ ಜನರಿಗೆ ಯಾಮಾರಿಸಿ ಹಣ ಗಳಿಸುತ್ತಿದ್ದರು. ಬಿಬಿಎಂಪಿಯಲ್ಲಿ ಸಬ್ಸಿಡಿ ದರದಲ್ಲಿ ಕಾರು, ನಿವೇಶನ, ಕೆಲಸ ಮತ್ತು ವಿಧವೆಯರಿಗೆ ಮಾಸಾಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದರು. ಇದೇರೀತಿ 60ಕ್ಕೂ ಹೆಚ್ಚು ಜನರಿಗೆ ವಂಚಿಸಿ 15 ಲಕ್ಷ ರೂ. ವಸೂಲಿ ಮಾಡಿದ್ದರು.
ಬಿಬಿಎಂಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ 8 ಸಾವಿರ ರೂ. ಪಡೆದು ವಂಚಿಸಿರುವ ಬಗ್ಗೆ ಉತ್ತರ ಸಿಇಎನ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಎಸ್. ಶಿವರತ್ನ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ. ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಭಾವನ ಮತ್ತು ಭಾವನಿ ಎಂಬುವರ ಸಹಾಯ ಪಡೆದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.