ಸಿಐಡಿ ಇನ್‌ಸ್ಪೆಕ್ಟರ್ ಸೋಗಿನಲ್ಲಿ ವಂಚನೆ

Fruad
Published on

ಬೆಂಗಳೂರು: ಸಿಐಡಿ ಇನ್‌ಸ್ಪೆಕ್ಟರ್ ಸೋಗಿನಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ನೌಕರಿ ಕೊಡಿಸುವ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದಿದ್ದು, ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲೆಕ್ಟ್ರಾನಿಕ್ ಸಿಟಿಯ ನಿಂಗಪ್ಪ ಎಸ್. ಬಾವಿಕಟ್ಟೆ, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ವಿಧಾನಸೌಧ ಪೊಲೀಸರು ವಿಜಯನಗರದ ಆರ್‌ಪಿಸಿ ಲೇಔಟ್ ನಿವಾಸಿ ಡಿ. ಪ್ರಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

2022ರ ಜೂನ್‌ನಲ್ಲಿ ಕೆಪಿಎಸ್‌ಸಿ ಕಚೇರಿ ಸಮೀಪ ಸಿಕ್ಕ ಪ್ರಶಾಂತ್, ಸಿಐಡಿ ಇನ್‌ಸ್ಪೆಕ್ಟರ್ ಎಂದು ನಿಂಗಪ್ಪಗೆ ಪರಿಚಯ ಮಾಡಿಕೊಂಡಿದ್ದಾರೆ. ತೋಟಗಾರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಹುದ್ದೆ ಖಾಲಿ ಇವೆ. 8 ಲಕ್ಷ ರೂ. ಕೊಟ್ಟರೆ ನೌಕರಿ ಕೊಡಿಸುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ನಿಂಗಪ್ಪ, ತನ್ನ ಪುತ್ರನಿಗೆ ಕೆಲಸ ಕೊಡಿಸುವ ಸಲುವಾಗಿ ಒಪ್ಪಿಕೊಂಡು ಹಂತ ಹಂತವಾಗಿ 5 ಲಕ್ಷ ರೂ. ಅನ್ನು ಪ್ರಶಾಂತ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಸ್ವಲ್ಪ ದಿನಗಳು ಬಿಟ್ಟು ಮುಖ್ಯಮಂತ್ರಿ ಕಚೇರಿಯಿಂದ ನೇರವಾಗಿ ನಿಮ್ಮ ವಿಳಾಸಕ್ಕೆ ನೇಮಕಾತಿ ಪ್ರಮಾಣ ಪತ್ರ ಬರಲಿದೆ ಎಂದು ಹೇಳಿ ಕಳುಹಿಸಿದ್ದರು. ಯಾವುದೇ ನೇಮಕಾತಿ ಮಾಡಿಕೊಟ್ಟಿಲ್ಲ. ನೊಂದ ನಿಂಗಪ್ಪ ಹಣ ಕೇಳಿದಾಗ ಸಬೂಬು ಹೇಳಿಕೊಂಡು ಸಮಯ ಮುಂದೆ ಹಾಕುತ್ತಿದ್ದರು. ಕೊನೆಗೆ ಪ್ರಶಾಂತ್ ಹಲವರಿಗೆ ವಂಚನೆ ಮಾಡಿರುವುದು ಗೊತ್ತಾಗಿ ನಿಂಗಪ್ಪ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net