ಶಾಲಾ ದಾಖಲಾತಿಯಲ್ಲೂ ಅಕ್ರಮ ಬಯಲು: 38 ವರ್ಷದ ಬಳಿಕ ಪತ್ತೆ; 7ನೇ ತರಗತಿ ರಿಜಿಸ್ಟರ್ ತಿದ್ದುಪಡಿ ಮಾಡಿ ಬೇರೊಬ್ಬರ ಹೆಸರು ಸೇರ್ಪಡೆ

Fraud
Published on

| ರವಿ ಗೋಸಾವಿ ಬೆಳಗಾವಿ

ಗೋಕಾಕ ತಾಲೂಕಿನ ನಂದಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯ 1984ನೇ ಸಾಲಿನ ದಾಖಲಾತಿ ಅಕ್ರಮವಾಗಿ ತಿದ್ದುಪಡಿಗೊಂಡಿದ್ದು, 38 ವರ್ಷದ ಬಳಿಕ ಬಯಲಾಗಿದೆ. ನಂದಗಾಂವದ ಪುಂಡಲೀಕ ಸನದಿ ಎಂಬುವವರು ಏಳನೇ ತರಗತಿವರೆಗೆ ಓದಿ ವ್ಯಾಸಂಗ ಮೊಟಕುಗೊಳಿಸಿದ್ದಾರೆ. ಆದರೆ, ಮೂರೂವರೆ ದಶಕ ಕಳೆದರೂ ಅವರಿಗೆ ದಾಖಲಾತಿ ಪ್ರಮಾಣ ಪತ್ರವೇ ಸಿಗುತ್ತಿಲ್ಲ. ಅದೇ ಊರಿನ ಅದೇ ಶಾಲೆಯಲ್ಲಿ ಕಲಿತ ಅದೇ ಹೆಸರಿನ ಮತ್ತೋರ್ವ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿದ್ದು, ನಿವೃತ್ತಿ ಅಂಚಿನಲ್ಲಿದ್ದಾರೆ. ಈ ಇಬ್ಬರಲ್ಲಿ ನಿಜಕ್ಕೂ ಪ್ರಾಥಮಿಕ ಶಿಕ್ಷಣ ಪಡೆದವರಾರು ಎಂಬ ಪ್ರಶ್ನೆಗೆ ಇದೀಗ ಶಿಕ್ಷಣ ಇಲಾಖೆಯಲ್ಲೂ ಉತ್ತರವಿಲ್ಲದಂತಾಗಿದೆ.

7ನೇ ತರಗತಿಗೆ ಶಾಲೆ ಬಿಟ್ಟಿದ್ದ ಪುಂಡಲೀಕ ಸನದಿ ಇತ್ತೀಚೆಗೆ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಿಸಿಕೊಳ್ಳುವುದಕ್ಕಾಗಿ ಶಾಲಾ ದಾಖಲಾತಿ ನೀಡಲು ಮುಖ್ಯ ಶಿಕ್ಷಕರಲ್ಲಿ ಮನವಿ ಮಾಡಿದ್ದರು. ಆದರೆ, ‘ನೀವು ಈ ಶಾಲೆಯಲ್ಲಿ ಕಲಿತ ಬಗ್ಗೆ ದಾಖಲಾತಿಯೇ ಇಲ್ಲ’ ಎಂದು ಶಿಕ್ಷಕರು ಹೇಳಿದಾಗ ಸನದಿ ತಬ್ಬಿಬ್ಬಾಗಿದ್ದಾರೆ. ಬಳಿಕ ತಮ್ಮ ಸಹಪಾಠಿಗಳ ಹೆಸರು ಹೇಳುತ್ತ 80ರ ದಶಕದ ದಾಖಲಾತಿಯಲ್ಲಿ ಹುಡುಕುವಂತೆ ಮನವಿ ಮಾಡಿದ್ದಾರೆ. ಆ ದಾಖಲಾತಿಯಲ್ಲಿನ ತಿದ್ದುಪಡಿ ಗಮನಿಸಿದ ಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಚಿಕ್ಕೋಡಿ ಜಿಲ್ಲಾ ಉಪನಿರ್ದೇಶಕರು ತಜ್ಞರ ತಂಡ ರಚಿಸಿ, ತನಿಖೆ ನಡೆಸಿದ್ದಾರೆ. ಆಗ ಅದೇ ಊರಿನ ಮತ್ತೊಂದು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಪುಂಡಲೀಕ ಲಗಮಪ್ಪ ಕೋಳಿ ಹೆಸರನ್ನು ದಾಖಲಾತಿ ಪುಸ್ತಕದಲ್ಲಿ ಪುಂಡಲೀಕ ಸನದಿ ಹೆಸರಿದ್ದ ಕಾಲಂನಲ್ಲಿ ಕೆಂಪು ಮಸಿಯಿಂದ ತಿದ್ದುಪಡಿ ಮಾಡಿ ಸೇರಿಸಲಾಗಿದೆ. ಆದರೆ, ತಿದ್ದುಪಡಿ ಮಾಡಿದವರು ಯಾರು ಎಂಬುದೇ ಇಲಾಖೆಗೆ ಯಕ್ಷ ಪ್ರಶ್ನೆಯಾಗಿದೆ.

ಯಾವುದೇ ಅರ್ಜಿ, ನ್ಯಾಯಾಲಯದ ಅನುಮತಿ ಪಡೆಯದೆ ಶಾಲೆಯ ಮೂಲ ದಾಖಲಾತಿ ತಿದ್ದುಪಡಿ ಮಾಡಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ನಿಯಮಬಾಹಿರವಾಗಿ ತಿದ್ದುಪಡಿ ಮಾಡಿರುವರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು. | ಮೋಹನ ಹಂಚಾಟೆ ಡಿಡಿಪಿಐ, ಚಿಕ್ಕೋಡಿ ದಾಖಲಾತಿಯನ್ನು ಸಂಬಂಧಿತ ಅಧಿಕಾರಿಗಳು ಕಾಯ್ದುಕೊಳ್ಳಬೇಕು, ಅದನ್ನು ಯಾರು, ಹೇಗೆ ತಿದ್ದಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಎಲ್ಲ ಸಹಪಾಠಿಗಳ ಹೆಸರೂ ನೆನಪಿದೆ. ನಂದಗಾಂವ ಗ್ರಾಮದ ಶಾಲೆಯಲ್ಲೇ ನಾನು ಓದಿರುವೆ. | ಪುಂಡಲೀಕ ಕೋಳಿ ಆರೋಪ ಎದುರಿಸುತ್ತಿರುವ ಶಿಕ್ಷಕ

ತನಿಖಾ ತಂಡದಿಂದ ಹುಡುಕಾಟ: ಅಕ್ರಮವಾಗಿ ಶಾಲಾ ದಾಖಲಾತಿ ತಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡವು ಆರೋಪ ಎದುರಿಸುತ್ತಿರುವ ಶಿಕ್ಷಕನ ದಾಖಲಾತಿಗಳನ್ನು ಪರಿಶೀಲಿಸಿದೆ. ನೇಮಕಾತಿ ಪರೀಕ್ಷೆ, ಐಟಿಸಿ, ಕಾಲೇಜು ಹಾಗೂ ಪ್ರೌಢ ಶಿಕ್ಷಣದ ದಾಖಲಾತಿಗಳೆಲ್ಲೂ ಸರಿಯಾಗಿವೆ. ಆದರೆ, ಪ್ರಾಥಮಿಕ ಶಿಕ್ಷಣದ ದಾಖಲಾತಿ ಮಾತ್ರ ತಿದ್ದುಪಡಿ ಮಾಡಿರುವುದನ್ನು ಪತ್ತೆ ಹಚ್ಚಿದೆ. ಆದರೆ, ಯಾವ ವರ್ಷ ಈ ತಿದ್ದುಪಡಿ ಆಗಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ತಿದ್ದುಪಡಿಯಿಂದ ತನಗೆ ವಂಚನೆಯಾಗಿದೆ ಎನ್ನುವ ಪುಂಡಲೀಕ ಸನದಿ, ಕೂಡಲೇ ತಮಗೇ ಏಳನೇ ತರಗತಿ ಉತ್ತೀರ್ಣಗೊಂಡ ಪ್ರಮಾಣ ಪತ್ರ ನೀಡುವಂತೆ ಇಲಾಖೆಯ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಇನ್ನು ಪುಂಡಲೀಕ ಕೋಳಿ 2007ರಿಂದ ನಂದಗಾಂವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲೇ ಸೇವೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net