ಐಪಿಎಸ್​ ಆಮಿಷ, ಗಂಡ-ಹೆಂಡತಿಯಿಂದಲೇ ಮೋಸ.. ಟಿವಿ ನಿರೂಪಕಿಯಿಂದ 3.5 ಕೋಟಿ ರೂ. ವಂಚನೆ..

Tv Ips
Published on

ಮುಂಬೈ: ಐಪಿಎಸ್ ಅಧಿಕಾರಿ ಆಗಬೇಕು ಎಂಬ 'ಕನಸು', ಅದಕ್ಕೆ ಸರಿಯಾಗಿ ಸಿಕ್ಕ 'ಸಪ್ನಾ', ಕೊನೆಗೆ 3.5 ಕೋಟಿ ರೂಪಾಯಿ ಕಳೆದುಕೊಂಡ ಮೇಲಾಯಿತು 'ನಿದ್ರಾಭಂಗ'.

ಹೌದು.. ಐಪಿಎಸ್ ಅಧಿಕಾರಿಯಾಗಿ ದೊಡ್ಡ ದೊಡ್ಡ ವಂಚನೆ ಪ್ರಕರಣಗಳನ್ನು ಬಯಲುಗೊಳಿಸಬೇಕು ಎಂಬ ಕನಸು ಕಂಡಿದ್ದ ವ್ಯಕ್ತಿಯೊಬ್ಬರು ಸಪ್ನಾ ಎಂಬಾಕೆಯಿಂದ ಮೋಸಕ್ಕೊಳಗಾಗಿ, 3.5 ಕೋಟಿ ರೂ. ಕಳೆದುಕೊಂಡಿದ್ದಲ್ಲದೆ, ಆ ಚಿಂತೆಯಲ್ಲೇ ನಿದ್ರೆ ಕೆಡುವಂತಾಗಿದೆ.

ಟಿವಿ ಚಾನೆಲ್​ನಲ್ಲಿ ನಿರೂಪಕಿಯಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಸಪ್ನಾ ರಹಾನ್​ಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ-ಸಂಪರ್ಕ ಇರುತ್ತದೆ ಎಂದು ಐಪಿಎಸ್​ ಆಕಾಂಕ್ಷಿ ಭಾವಿಸಿದ್ದರು. ಅದನ್ನೇ ದುರ್ಬಳಕೆ ಮಾಡಿಕೊಂಡ ಸಪ್ನಾ, ತನ್ನ ಪತಿ ಪುನೀತ್​ ಕುಮಾರ್ ಜತೆ ಸೇರಿ ಸರಿಯಾಗಿಯೇ ವಂಚಿಸಿದ್ದಾಳೆ.

ಜಲಂಧರ್​ನಲ್ಲಿ ಪೋಸ್ಟಿಂಗ್ ಮಾಡಿಸುವುದಾಗಿ ಭರವಸೆ ನೀಡಿದ್ದ ಈ ದಂಪತಿ 3.5 ಕೋಟಿ ರೂ. ಪಡೆದಿದ್ದರು. ಬಳಿಕ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದರು. ಆದರೆ ನಂತರ ವಂಚನೆ ಒಳಗಾಗಿದ್ದು ಅರಿವಾಗುತ್ತಿದ್ದಂತೆ ಆ ವ್ಯಕ್ತಿ ಪಂಜಾಬ್​ನ ಜಲಂಧರ್​ನಲ್ಲಿ ದೂರು ದಾಖಲಿಸಿದ್ದರು.

ಪಂಜಾಬ್​ ಪೊಲೀಸರ ಆ್ಯಂಟಿ ಫ್ರಾಡ್ ಯುನಿಟ್​ ಈ ಪ್ರಕರಣ ಸಂಬಂಧ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಮುಂಬೈ ಪೊಲೀಸರು ಈ ವಂಚಕ ದಂಪತಿಯನ್ನು ಭಾನುವಾರ ಮುಂಬೈನ ಒಶಿವಾರಾ ಎಂಬಲ್ಲಿನ ಅಪಾರ್ಟ್​ಮೆಂಟ್​ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಳಿಕ ಪಂಜಾಬ್​ ಪೊಲೀಸರು ಈ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net