

ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಿ.ಎಸ್ ಆರ್.ಪಿ.ಸಿ ಲೇಔಟ್‌ನ ನಿವಾಸಿಗಳಾದ ಅನಿತಾ(೪೨) ಹಾಗೂ ರಾಮಚಂದ್ರ ಭಟ್(೫೬)ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರು ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೨೦೨೧ ರಲ್ಲಿ ಸ್ನೇಹಿತ ಮಂಜುನಾಥ್ ಮೂಲಕ ಸುನಿಲ್ ಅವರಿಗೆ ರಾಮಚಂದ್ರ ಭಟ್ ಪರಿಚಯವಾಗಿತ್ತು. ತನಗೆ ಬೆಂಗಳೂರಿನ ಸಿಐಡಿ ಘಟಕ ಸೆಕ್ಷನ್ ಸೂಪರಿಡೆಂಟ್ ಆಗಿರುವ ಅನಿತಾ ಎಂಬುವವರ ಪರಿಚಯವಿದೆ. ಅವರಿಗೆ ಕೆ.ಪಿ.ಎಸ್.ಸಿ ಹಾಗೂ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ರಾಮಚಂದ್ರ ಭಟ್ ನಂಬಿಸಿದ್ದ. ಪ್ರತಿಯಾಗಿ ಅನಿತಾರವರು ಕೇಳಿದಷ್ಟು ಹಣವನ್ನು ಹೊಂದಿಸಿ ಕೊಡಬೇಕೆಂದು ತಿಳಿಸಿದ್ದ. ಬಳಿಕ ಅನಿತಾಳನ್ನು ಸಿಐಡಿ ಕಚೇರಿಯಲ್ಲೇ ಸುನಿಲ್ಗೆ ಭೇಟಿ ಮಾಡಿಸಿದ್ದ. ಇದೇ ವೇಳೆ ತನ್ನ ಕಚೇರಿ, ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ ಅನಿತಾ, ಕೆ.ಪಿ.ಎಸ್.ಸಿ ಮೂಲಕ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುದಾಗಿ ಸುನಿಲ್ನನ್ನು ನಂಬಿಸಿದ್ದಾರೆ ಮತ್ತು ಇದಕ್ಕಾಗಿ ೪೦ ಲಕ್ಷ ರೂ. ಹಣವನ್ನು, ಕೊಡಬೇಕೆಂದು ಬೇಡಿಕೆಯಿಟ್ಟಿದ್ದರು. ಆರೋಪಿಗಳ ಸಂಚು ಅರಿಯದ ಸುನಿಲ್, ೨೦೨೧ರ ಡಿಸೆಂಬರ್ ಹಾಗೂ ೨೦೨೨ರ ಫೆಬ್ರವರಿಯಲ್ಲಿ ಆರೋಪಿಗಳಿಗೆ ಹಂತಹಂತವಾಗಿ ೪೦ ಲಕ್ಷ ರೂ ನೀಡಿದ್ದರು. ಆದರೆ ನಂತರದಲ್ಲಿ ಸುನಿಲ್ ಅವರಿಗೆ ಯಾವುದೇ ಸರ್ಕಾರಿ ಕೆಲಸವನ್ನ ಕೊಡಿಸಿರಲಿಲ್ಲ. ಹಣ ವಾಪಸ್ ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಜಯನಗರ ಠಾಣೆಗೆ ಸುನಿಲ್ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಬ್ಬರೂ ಇದೇ ಮಾದರಿಯಲ್ಲಿ ಇನ್ನೂ ಕೆಲವರಿಂದ ಸುಮಾರು ೨ ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆಗೊಳಗಾದವರು ದೂರು ನೀಡಿ:
ಎ್ಡಿಸಿ, ಎಸ್‌ಡಿಸಿ, ಎಇಇ, ಹುದ್ದೆಗಳನ್ನು ಕೊಡಿಸುವುದಾಗಿ ಸಿಐಡಿಯ ಐಡಿ ಕಾರ್ಡ್ ಅನ್ನು ತೋರಿಸಿದ್ದರು. ಐಡಿ ಕಾರ್ಡ್‌ನ್ನು ನೋಡುತ್ತಿದ್ದ ಉದ್ಯೋಗಕಾಂಕ್ಷಿಗಳು ಇವರನ್ನು ನಂಬಿ ಲಕ್ಷಾಂತರ ರೂ. ನೀಡಿ ಮೋಸ ಹೋಗಿದ್ದಾರೆ. ಅನಿತಾ ಆರ್.ಟಿ.ಜಿ.ಎಸ್ ಮತ್ತು ಚಕ್ ಅನ್ನು ಪಡೆಯದೇ ನಗದು ಹಣವನ್ನು ಮಾತ್ರ ಪಡೆಯುತ್ತಿದ್ದಳು. ಆರೋಪಿ ಅನಿತಾ ಈವರೆಗೂ ೬ ಮಂದಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ಇದೇ ರೀತಿ ಬಿಜಾಪುರ, ಬಾಗಲಕೋಟೆ ಮತ್ತು ಗದಗ ಭಾಗದ ಹಲವು ಮಂದಿ ಮೋಸ ಮಾಡಿದ್ದಾರೆ. ೧.೩ ಕೋಟಿ ರೂ. ಅಷ್ಟು ವಂಚನೆ ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ. ಆದರೆ ಕೆಲವರು ದೂರು ನೀಡಿಲ್ಲ. ಮೋಸ ಹೋದವರು ವಿಜಯನಗರ ಠಾಣೆಗೆ ಹಾಜರಾಗಿ ದೂರು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.