

ಕೋಲಾರ: ಟ್ರಸ್ಟ್ ಮೂಲಕ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಂದ ಠೇವಣಿ ಕಟ್ಟಿಸಿಕೊಂಡು ಮಹಿಳೆ ಪರಾರಿಯಾಗಿರುವ ಘಟನೆ ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಮೌಲ್ಯ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ನಗರ ಕಠಾರೀಪಾಳ್ಯ ಬಡಾವಣೆಯ ನಾಗವೇಣಿ ಮಹಿಳೆಯರಿಂದ ಹಣ ಕಟ್ಟಿಸಿಕೊಂಡು ಪರಾರಿಯಾಗಿದ್ದಾರೆ.
ನಾಗವೇಣಿ, ಟ್ರಸ್ಟ್ ಹೆಸರಿನಲ್ಲಿ ಏಜೆಂಟರನ್ನು ನೇಮಕ ಮಾಡಿ ಮುಳಬಾಗಿಲು, ಕೋಲಾರ, ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿನ ಮಹಿಳೆಯರನ್ನು ಸಂಪರ್ಕಿಸಿ, ಟ್ರಸ್ಟ್ನಲ್ಲಿ ಹಣ ಠೇವಣಿ ಇಟ್ಟರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ, ಬರೋಬ್ಬರಿ 1.50 ಕೋಟಿ ರೂ.ಗೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾರೆ
ವಂಚಕರನ್ನು ನಂಬಿದ ಮಹಿಳೆಯರು ೫೦೦ ರೂ.ನಿಂದ ೨೫ ಸಾವಿರ ರೂ. ವರೆಗೆ ಠೇವಣಿ ಇಟ್ಟಿದ್ದಾರೆ. ಕೆಲ ದಿನಗಳ ಬಳಿಕ ಸಾಲ ಕೊಡುವಂತೆ ಒತ್ತಾಯ ಮಾಡುತ್ತಿದ್ದರು, ಇದಕ್ಕೆ ನಾಳೆ, ಮುಂದಿನ ವಾರ, ಮುಂದಿನ ತಿಂಗಳು ಹೀಗೆ ಸಬೂಬು ಹೇಳಿಕೊಂಡು ಬರುತ್ತಿದ್ದ ಚಾಲಾಕಿ, ಕೆಲವರಿಗೆ ಸೋಮವಾರ ಚೆಕ್ ನೀಡುವುದಾಗಿ ಹೇಳಿದ್ದಳು. ಈ ಭರವಸೆ ಮೇರೆಗೆ ಕಠಾರೀಪಾಳ್ಯ ಕಚೇರಿಗೆ ಭೇಟಿ ನೀಡಿ ನಾಗವೇಣಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ.
ಕಚೇರಿ ಕಟ್ಟಡದಲ್ಲಿನ ಮನೆಯವರನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ನಾಗವೇಣಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸಿ, ಚೆಕ್‌ಗಳನ್ನು ತರಲು ದೆಹಲಿಗೆ ಬಂದಿದ್ದೇನೆ. ಕೋಲಾರಕ್ಕೆ ಬಂದ ಕೂಡಲೇ ಸಾಲದ ಚೆಕ್‌ಗಳನ್ನು ಕೊಡುವುದಾಗಿ ಹೇಳಿದ್ದಾರೆ. ಸಂಜೆಯಾದರೂ ಅಸಾಮಿ ಬಾರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ಇದರಿಂದಾಗಿ ಗಾಬರಿಗೊಂಡಿರುವ ಮಹಿಳೆಯರು ಗುಂಪು ಸೇರಿಕೊಂಡಿದ್ದು, ಮಾಹಿತಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಚೇರಿಯಲ್ಲಿದ್ದ ಪುಸ್ತಕ, ಚಾರಿಟಬಲ್ ಟ್ರಸ್ಟ್ ಬ್ಯಾನರ್ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ನಂದಿನಿ ಚಾರಿಟೆಬಲ್ ಟ್ರಸ್ಟ್‌ನವರೊಂದಿಗೆ ವ್ಯವಹಾರ ಪತ್ರವೊಂದು ಲಭ್ಯವಾಗಿದೆ.
ನಾಗವೇಣಿ ಅವರು ನಮ್ಮನ್ನು ಸಂಪರ್ಕಿಸಿ ಹಣ ಕಟ್ಟಿದರೆ ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಸಾಲದ ಆಸೆಗೆ ಶಕ್ತಿಗೆ ಅನುಸಾರ ಠೇವಣಿ ಇಟ್ಟಿದ್ದೇವೆ. 5 ಸಾವಿರ ರೂ. ಠೇವಣಿಗೆ 1 ಲಕ್ಷ ರೂ., 10 ಸಾವಿರ ಠೇವಣಿಗೆ 2 ಲಕ್ಷ ಹೀಗೆ ಹಣ ಟ್ರಸ್ಟ್‌ಗೆ ಪಾವತಿ ಮಾಡಿರುವುದಾಗಿ ತಿಳಿದು ಬಂದಿದೆ.