ಸಿನಿಮಾ ವಿತರಕನಿಂದ ವಂಚನೆ

nanna
Published on

ಬೆಂಗಳೂರು: ಕನ್ನಡ ಸಿನಿಮಾ ‘ನನ್ನ ಪ್ರಕಾರ’ ಚಿತ್ರ ಪಿವಿಆರ್‌ನಲ್ಲಿ ತೆರೆಕಂಡಾಗ ಟಿಕೆಟ್ ಹಣ ನೀಡದೆ ವಂಚನೆ ಮಾಡಿರುವುದಾಗಿ ವಿತರಕನ ವಿರುದ್ಧ ಉಪ್ಪಾರಪೇಟೆ ಠಾಣೆಗೆ ನಿರ್ಮಾಪಕ ಎಸ್. ಗುರುರಾಜ್ ದೂರು ನೀಡಿದ್ದಾರೆ. ಈ ಮೇರೆಗೆ ವಿತರಕ ದೀಪಕ್ ಗಂಗಾಧರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿನಯ್ ಬಾಲಾಜಿ ನಿರ್ದೇಶನದ ‘ನನ್ನ ಪ್ರಕಾರ’ ಸಿನಿಮಾಗೆ ಗುರುರಾಜ್ ಬಂಡವಾಳ ಹೂಡಿಕೆ ಮಾಡಿದ್ದರು. 2019ರಲ್ಲಿ ಚಿತ್ರ ಬಿಡುಗಡೆ ಜವಾಬ್ದಾರಿಯನ್ನು ದೀಪಕ್ ಗಂಗಾಧರ್‌ಗೆ ವಹಿಸಿದ್ದರು. ‘ಪಿವಿಆರ್ ಚಿತ್ರಮಂದಿದ ಟಿಕೆಟ್ ಮಾರಾಟದಿಂದ ಬಂದ 19 ಲಕ್ಷ ರೂ.ಗಳನ್ನು ದೀಪಕ್ ಗಂಗಾಧರ್ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡರು. ವಾಪಸ್ ಕೇಳಿದಾಗ ಕೊಡಲಿಲ್ಲ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಣ ಕೊಡುವುದಾಗಿ ಲೆಟರ್ ಹೆಡ್‌ನಲ್ಲಿ ಬರೆದುಕೊಟ್ಟಿದ್ದರು. ಇದೀಗ ಹಣ ಕೇಳಿದಾಗ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಗುರುರಾಜ್ ಆರೋಪಿಸಿದ್ದಾರೆ.

ನನಗೇ ₹96 ಸಾವಿರ ಕೊಡಬೇಕು.

ನಿರ್ದೇಶಕ ವಿನಯ್ ಬಾಲಾಜಿ ಮತ್ತು ಗುರುರಾಜ್ ಬಂದು ಚಿತ್ರ ಬಿಡುಗಡೆಗೆ ವೆಚ್ಚ ಭರಿಸುವಂತೆ ಮನವಿ ಮಾಡಿದರು. ಅದಕ್ಕೆ ನಾನು ಒಪ್ಪಿಕೊಂಡು 80 ಚಿತ್ರಮಂದಿರಲ್ಲಿ ಬಿಡುಗಡೆ ಮಾಡಿದೆವು. ಅಷ್ಟೇನೂ ಒಳ್ಳೆಯ ಯಶಸ್ಸು ಕಾಣದಿದ್ದರೂ ನಿರ್ಮಾಪಕರ ಮನವಿ ಮೇರೆಗೆ ಮೂರು ಚಿತ್ರಮಂದಿರದಲ್ಲಿ 5 ವಾರ ಓಡಿಸಲಾಯಿತು. ನನಗೆ 14.41 ಲಕ್ಷ ರೂ. ಷೇರು ಬರಬೇಕಿತ್ತು. ಆದರೆ, 15.37 ಲಕ್ಷ ರೂ. ವೆಚ್ಚವಾಗಿದ್ದು, 96 ಸಾವಿರ ರೂ.ಗಳನ್ನು ನಿರ್ಮಾಪಕರೇ ಕೊಡಬೇಕು. 3 ವರ್ಷದ ಬಳಿಕ ಬಂದು 20 ಲಕ್ಷ ರೂ.ಗೆ ಬೇಡಿಕೆವೊಡ್ಡಿ ಸುಳ್ಳು ಕೇಸ್ ಮಾಡಿಸಿದ್ದಾರೆ ಎಂದು ದೀಪಕ್ ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net