

ಬೆಂಗಳೂರು: ಸಾರಿಗೆ ಇಲಾಖೆಯು ರಾಜ್ಯದಲ್ಲಿ ೨೦೧೯ ರ ಏ.೧ ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಕಡ್ಡಾಯಗೊಳಿಸಿದೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ ಲಿಂಕ್‌ಗಳನ್ನು ಆನ್‌ಲೈನ್‌ನಲ್ಲಿ ಹಾಕಿ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅಪ್ಲೈ ಮಾಡುವ ಮುನ್ನ ವಾಹನ ಸವಾರರು ಎಚ್ಚರ ವಹಿಸಬೇಕಿದೆ, ಇಲ್ಲವಾದರೆ ನೀವು ಸೈಬರ್ ಖದೀಮರ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳುವುದು ನಿಶ್ಚಿತ. ಆನ್‌ಲೈನ್‌ನಲ್ಲಿ ನಕಲಿ ವೆಬ್‌ಸೈಟ್ ಮತ್ತು ನಕಲಿ ಕ್ಯೂ ಆರ್ ಕೋಡ್ ಲಿಂಕ್‌ಗಳ ಹಾವಳಿ ಹೆಚ್ಚಾಗಿದೆ. ಅಪ್ಪಿ ತಪ್ಪಿ ಈ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಕೆಲವೇ ಸೆಕೆಂಡುಗಳಲ್ಲಿ ಮಾಯವಾಗುತ್ತದೆ ಎಚ್ಚರ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ನಕಲಿ ಲಿಂಕ್ ಹರಿಬಿಟ್ಟು ಕೆಲ ಖದೀಮರು ದುಡ್ಡು ಮಾಡಲು ಹೊರಟಿದ್ದಾರೆ. ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್‌ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕಾೃನ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿದ್ದ ಹಣ ಖದೀಮರ ಪಾಲಾಗುತ್ತದೆ.
ಎಕ್ಸ್ ಮೂಲಕ ಪೊಲೀಸರಿಗೆ ದೂರು:
ಈ ಬಗ್ಗೆ ರಕ್ಷಿತ್ ಪಾಂಡೆ ಎಂಬ ವ್ಯಕ್ತಿ ತಮ್ಮ ಎಕ್ಸ್ ಖಾತೆ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ಟ್ವಿಟ್ ಮಾಡಿ ದೂರು ನೀಡಿದ್ದು, ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.