ರೇಷನ್ ಎತ್ತುವಳಿ ಅಕ್ರಮ: ನಕಲಿ ನ್ಯಾಯಬೆಲೆ ಅಂಗಡಿಗಳ ಕಳ್ಳಾಟ, ನವೀಕರಣ ಮಾಡದೆ ವಿತರಣೆ

Ration
Published on

| ಹರೀಶ್ ಬೇಲೂರು ಬೆಂಗಳೂರು

ರಾಜ್ಯದಲ್ಲಿ ನಕಲಿ ನ್ಯಾಯಬೆಲೆ ಅಂಗಡಿಗಳು ಹಾಗೂ ಕನ್ಸೂಮರ್ಸ್ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್) ಅಕ್ರಮವಾಗಿ ರೇಷನ್ ಎತ್ತುವಳಿ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಆಹಾರ ಭದ್ರತೆ ಯೋಜನೆಯಡಿ ನಡೆಯುತ್ತಿರುವ ದೊಡ್ಡ ಮಟ್ಟದ ಅವ್ಯವಹಾರದಲ್ಲಿ ಆಹಾರ ಇಲಾಖೆ ಆಯಾ ಜಿಲ್ಲೆಯ ಉಪ ನಿರ್ದೇಶಕರು, ಆಹಾರ ನಿರೀಕ್ಷಕರು ಹಾಗೂ ಸಗಟು ಮಳಿಗೆಗಳ ವ್ಯವಸ್ಥಾಪಕರು ಶಾಮೀಲಾಗಿದ್ದಾರೆ. ಈ ಬಗ್ಗೆ ಇಲಾಖೆಗೂ ವ್ಯಾಪಕ ದೂರುಗಳು ಬರಲಾರಂಭಿಸಿವೆ.

ಪಡಿತರ ವಿತರಿಸುವ ಕನ್ಸೂಮರ್ಸ್ ಕ್ರೆಡಿಟ್ ಸೊಸೈಟಿಗಳು ಪ್ರತಿ ವರ್ಷ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಬೇಕೆಂಬ ನಿಯಮವಿದೆ. ಆದರೆ, ಸಾಕಷ್ಟು ಸಿಸಿಎಸ್​ಗಳು ಪರವಾನಗಿ ನವೀಕರಣ ಮಾಡದೆ ಅಕ್ರಮವಾಗಿ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿವೆ. ಅದೇ ರೀತಿ, ಪ್ರತಿ ಐದು ವರ್ಷಕ್ಕೊಮ್ಮೆ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರಾಧಿಕಾರ ನವೀಕರಣ ಮಾಡಬೇಕಿತ್ತು. ಆದರೆ, ಕೆಲ ಮಾಲೀಕರು ಪರವಾನಗಿ ನವೀಕರಣ ಮಾಡದೆ ಕಾರ್ಡ್​ದಾರರಿಗೆ ಪಡಿತರವನ್ನು ವಿತರಿಸುತ್ತಿವೆ.

ಕೆಲವರು, ಬೇರೆ ಹೆಸರಿನಲ್ಲಿ ನಾಲ್ಕೈದು ಪ್ರಾಧಿಕಾರ ತೆಗೆದುಕೊಂಡು ಅಂಗಡಿ ನಡೆಸುತ್ತಿದ್ದಾರೆ. ಅಲ್ಲದೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಥವಾ ಅವರ ಅಧಿಕೃತ ಪ್ರತಿನಿಧಿಗಳಲ್ಲದವರು ಪಡಿತರ ಧಾನ್ಯ ಎತ್ತುವಳಿ ಮಾಡಲು ಬರುತ್ತಿರುವ ಕುರಿತು ಗೌಪ್ಯವಾಗಿ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಅಕ್ಕಿ, ರಾಗಿ ಎತ್ತುವಳಿಯಲ್ಲಿ ಕೆಲವೆಡೆ ಅನಾಮಿಕ ವ್ಯಕ್ತಿಗಳು ಎತ್ತುವಳಿ ಮಾಡುತ್ತಿರುವ ಬಗ್ಗೆಯೂ ಇಲಾಖೆ ಗುರುತಿಸಿದೆ. ಇಲಾಖೆ ಮಾರ್ಗಸೂಚಿ ಪ್ರಕಾರ ನಿಗದಿತ ದಿನಾಂಕದಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಥವಾ ಅಧಿಕೃತ ಪ್ರತಿನಿಧಿಗಳು ಸಗಟು ಮಳಿಗೆಗಳಿಗೆ ತೆರಳಿ ತಮ್ಮ ಅಂಗಡಿಗಳಿಗೆ ಹಂಚಿಕೆಯಾದ ರೇಷನ್ ಎತ್ತುವಳಿ ಮಾಡಬೇಕು.

ಹಲವು ಮಾರ್ಗದಲ್ಲಿ ಕನ್ನ: ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡಿರುವುದು, ಭಾರತ ಆಹಾರ ನಿಗಮ (ಎಫ್​ಸಿಐ) ಗೋದಾಮಿಗಳಿಂದ ಇಲಾಖೆ ಸಗಟು ಮಳಿಗೆಗಳಿಗೆ ಪಡಿತರ ಧಾನ್ಯಗಳನ್ನು ಸರಕು ಲಾರಿಯಲ್ಲಿ ಸಾಗಿಸುವ ವೇಳೆ ಕದಿಯುವುದು, ಹೀಗೆ ಬೇರೆ ಬೇರೆ ಮಾರ್ಗದಲ್ಲಿ ಕನ್ನ ಹಾಕುವ ಕೆಲವರು ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಿ ಹಣ ಮಾಡುವ ದಂಧೆ ತೊಡಗಿದ್ದಾರೆ.

ಪಡಿತರ ವಿತರಿಸದಿದ್ದರೆ ಅಪರಾಧ

ಬೆಂಗಳೂರು: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಧಾನ್ಯ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಕೃತ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪಡಿತರ ವಿತರಿಸದ ಕಾರಣಕ್ಕೆ ವ್ಯಕ್ತಿಯೊಬ್ಬರ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿದ್ದ ಅಧಿಕಾರಿಗಳ ಕ್ರಮವನ್ನು ಎತ್ತಿಹಿಡಿದಿದೆ.

ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಪಡಿತರ ವಿತರಿಸಿದ, ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸದ ಆರೋಪದಲ್ಲಿ ವಿ.ಎಂ. ಸಂಜೀವಯ್ಯ (ಮೃತಪಟ್ಟಿದ್ದಾರೆ) ಎಂಬುವರ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರಾಮನಗರ ಆಹಾರ ಇಲಾಖೆ ಉಪ ಆಯುಕ್ತರು ರದ್ದುಪಡಿಸಿದ್ದರು. ಈ ಕ್ರಮವನ್ನು ಹೈಕೋರ್ಟ್ ಏಕಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ರದ್ದುಕೋರಿ ವಾಜರಹಳ್ಳಿಯ ಜಯಮ್ಮ (ಸಂಜೀವಯ್ಯ ಪತ್ನಿ) ಮತ್ತವರ ಮಕ್ಕಳು ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ, ಬಿಪಿಎಲ್ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆಹಾರ ಧಾನ್ಯ, ಸೀಮೆ ಎಣ್ಣೆ ಇನ್ನಿತರ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗೆ ವಿತರಿಸುವುದೇ ಪಿಡಿಎಸ್​ನ ಧ್ಯೇಯೋದ್ದೇಶವಾಗಿದೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸದಿರುವುದು ಗಂಭೀರ ಸ್ವರೂಪದ ಕೃತ್ಯವಾಗಿದ್ದು, ಇದರಿಂದ ಅವರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?:ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದುಕೊಂಡಿದ್ದ ಸಂಜೀವಯ್ಯ, 13 ವರ್ಷಕ್ಕೂ ಅಧಿಕ ವರ್ಷಗಳಿಂದ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದರು. ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೆಲ ಪಡಿತರ ಚೀಟಿದಾರರಿಗೆ ಪಡಿತರ ಲಭ್ಯವಾಗುತ್ತಿಲ್ಲ. ಪಡಿತರ ವಿತರಿಸಿದ ನಂತರ ರಸೀದಿ ನೀಡುತ್ತಿಲ್ಲ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗಡಿ ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ವಿವರಣೆ ನೀಡಬೇಕೆಂದು ಶೋಕಾಸ್ ನೋಟಿಸ್ ನೀಡಲಾಗಿತ್ತು.

ಶೋಕಾಸ್ ನೋಟಿಸ್​ಗೆ ಉತ್ತರ ನೀಡಲಾಗಿತ್ತಾದರೂ, ಅದರಿಂದ ತೃಪ್ತರಾಗದ ಉಪ ಆಯುಕ್ತರು ಖುದ್ದಾಗಿ ವಿಚಾರಣೆ ನಡೆಸಿದ್ದರು. ಆಗ ಸಂಜೀವಯ್ಯ ಆರೋಪಗಳನ್ನು ಒಪ್ಪಿಕೊಂಡಿದ್ದರು. ಇದರಿಂದ, ಅವರ ಪರವಾನಗಿ ರದ್ದುಪಡಿಸಲಾಗಿತ್ತು. ಆ ಆದೇಶವನ್ನು ಮೆಲ್ಮನವಿ ಪ್ರಾಧಿಕಾರ ಮತ್ತು ಹೈಕೋರ್ಟ್ ಏಕಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಮಧ್ಯೆ ಸಂಜೀವಯ್ಯ ಮೃತಪಟ್ಟ ಕಾರಣ ಅವರ ಪತ್ನಿ ಮತ್ತು ಕುಟುಂಬದವರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net