ಎಟಿಎಂ ಬೂತ್‌ನಲ್ಲಿ ವಂಚನೆ

Cyber Crime
Published on

ಬೆಂಗಳೂರು: ಬ್ಯಾಂಕ್ ಎಟಿಎಂ ಬೂತ್‌ನಲ್ಲಿ ನಗದು ಜಮೆಗೆ ಬಂದ ವ್ಯಕ್ತಿಗೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ 15 ಸಾವಿರ ರೂ. ಪಡೆದು ವಂಚಕ ಮೋಸ ಮಾಡಿದ್ದಾನೆ.

ಸುಂಕದಕಟ್ಟೆ ಪೈಪ್‌ಲೈನ್ ನಿವಾಸಿ ಆನಂದ್ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.

ಬಿಡಬ್ಲುೃಎಸ್‌ಎಸ್‌ಬಿ ನೌಕ ಆನಂದ್ ಅವರು ಗಾಂಧಿನಗರದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಜಮೆ ಮಾಡಲು ಹೋಗಿದ್ದರು. ಅದೇ ವೇಳೆ ಬೂತ್‌ನಿಂದ ಹೊರಗೆ ಬಂದ ವ್ಯಕ್ತಿ, ಸಾಹಿಲ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ತುರ್ತಾಗಿ ಹಣ ಡ್ರಾ ಮಾಡಬೇಕಿತ್ತು. ಲಿಮಿಟ್ ಕ್ರಾಸ್ ಆಗಿರುವ ಹಿನ್ನೆಲೆಯಲ್ಲಿ ಡ್ರಾ ಆಗುತ್ತಿಲ್ಲ. ವ್ಯಾಲೆಟ್‌ನಲ್ಲಿ ಹಣ ವರ್ಗಾವಣೆ ಮಾಡುತ್ತೇನೆ, 15 ಸಾವಿರ ರೂ. ನಗದು ಕೊಡುವಂತೆ ಆನಂದ್ ಬಳಿ ಮನವಿ ಮಾಡಿದ್ದಾನೆ. ತುರ್ತಾಗಿ ಹಣ ಬೇಕಿರಬೇಕೆಂದು ನಂಬಿದ ಆನಂದ್, ವಂಚಕನಿಗೆ 15 ಸಾವಿರ ರೂ. ಕೊಟ್ಟಿದ್ದಾರೆ. ನಂತರ ಆರೋಪಿ ಸಾಹಿಲ್, ವ್ಯಾಲೆಟ್‌ನಲ್ಲಿ 15 ಸಾವಿರ ರೂ. ಆರ್‌ಟಿಜಿಎಸ್ ಮಾಡಿದಂತೆ ನಾಟಕ ಮಾಡಿ ಹೊರಟು ಹೋಗಿದ್ದಾನೆ.

ಮನೆಗೆ ಬಂದ ಆನಂದ್, ಎಷ್ಟು ಹೊತ್ತಾದರೂ ಹಣ ಬ್ಯಾಂಕ್ ಖಾತೆಗೆ ಜಮೆ ಆಗದೆ ಇರುವುದನ್ನು ಗಮನಿಸಿ ಸಾಹಿಲ್ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆ್ ಆಗಿತ್ತು. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ಉಪ್ಪಾರಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net