ಮತ್ತೆ ಲಾಕ್​ಡೌನ್​! ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಎಲ್ಲ ಬಂದ್​!

france
Published on

ಪ್ಯಾರಿಸ್​: ಕರೊನಾ ಸೋಂಕು ನಿವಾರಣೆಯಾಗುತ್ತಿದೆ ಎನ್ನುವಷ್ಟರಲ್ಲಿ ಕರೊನಾ ರೂಪಾಂತರಿ ಆರಂಭವಾಗಿದೆ. ಒಂದು ಲಾಕ್​ಡೌನ್​ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್​ಡೌನ್​ ಯೋಚನೆಯನ್ನು ಮಾಡಲಾಂಭಿಸಿವೆ. ಅದೇ ರೀತಿ ಈ ದೇಶದಲ್ಲಿ ಎರಡನೇ ಬಾರಿ ಲಾಕ್​ಡೌನ್​ ಜಾರಿ ಮಾಡಲಾಗಿದೆ.

ಫ್ರಾನ್ಸ್​ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಬೇರಾವುದನ್ನೂ ತೆರೆಯುವುದಕ್ಕೆ ಅವಕಾಶವಿಲ್ಲ. ಎಲ್ಲ ಕಚೇರಿಗಳನ್ನೂ 6 ಗಂಟೆಯೊಳಗೆ ಮುಚ್ಚಬೇಕು ಎಂದು ಫ್ರಾನ್ಸ್​ ಸರ್ಕಾರ ಆದೇಶಿಸಿದೆ. ಹಾಗೆಯೇ ಬೇರೆ ದೇಶಗಳಿಂದ ಫ್ರಾನ್ಸ್​ಗೆ ಬರುವವರು ಕರೊನಾ ನೆಗೆಟಿವ್​ ವರದಿ ತರುವುದು ಕಡ್ಡಾಯ ಮತ್ತು ಅವರು ಒಂದು ವಾರದ ಕ್ವಾರಂಟೈನ್​ಗೆ ಒಳಗಾಗಲೇಬೇಕು ಎನ್ನುವ ನಿಯಮ ಜಾರಿಗೊಳಿಸಲಾಗಿದೆ.

ದೇಶದಲ್ಲಿ ಈಗಾಗಲೇ 70 ಸಾವಿರ ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕರೊನಾದಿಂದಾಗಿ ಮೃತರಾದವರ ಪಟ್ಟಿಯಲ್ಲಿ ನಮ್ಮ ದೇಶ 7ನೇ ಸ್ಥಾನದಲ್ಲಿದೆ. ಅನೇಕ ದೇಶಗಳಿಗಿಂತ ಸುರಕ್ಷಿತ ಸ್ಥಾನದಲ್ಲಿ ನಾವಿದ್ದೇವಾದರೂ ಈ ಹಂತದಲ್ಲಿಯೇ ಮುಂಜಾಗ್ರತೆ ತೆಗೆದುಕೊಳ್ಳುವುದು ಅತ್ಯಗತ್ಯ. ಅದೇ ಕಾರಣದಿಂದಾಗಿ ಈ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಫ್ರಾನ್ಸ್​ ಸರ್ಕಾರ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net