

ವುಹಾನ್: ಕರೊನಾ ವೈರಸ್ ಸೋಂಕು ತಡೆಗಟ್ಟಲು ಚೀನಾದಲ್ಲಿ ತಿಂಗಳುಗಳ ಕಾಲ ಹೇರಿದ್ದ ಲಾಕ್ಡೌನ್ನಿಂದಾಗಿ ಆಹಾರ ಸಿಗದೆ ಹಸಿವಿನಿಂದ ನೂರಾರು ಪ್ರಾಣಿಗಳು ಮೃಗಾಯದಲ್ಲಿ ಸಾವಿಗೀಡಾಗಿವೆ.
ಈ ಬಗ್ಗೆ ಮಾತನಾಡಿರುವ ಚೀನಾದ ಮೃಗಾಲಯದ ಸಿಬಂದಿ, ಲಾಕ್ಡೌನ್ನಿಂದಾಗಿ ಪ್ರಾಣಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳಲು ಮಾಲೀಕರು ಸಾಕಷ್ಟು ಪರದಾಡಿದರು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಇತ್ತೀಚಿನ ವಿಡಿಯೋವೊಂದರಲ್ಲಿ ಆರ್ಕ್ಟಿಕ್ ನರಿಗಳು ಹಸಿವಿನಿಂದ ಸಾವೀಗೀಡಾಗಿದ್ದ ಅಲ್ಪಕಾ ಮೃತದೇಹವನ್ನು ತಿಂದು ಹಸಿವು ನೀಗಿಸಿಕೊಂಡಿದೆ. ಈ ಘಟನೆ ಕೇಂದ್ರ ಚೀನಾದ ಹುನಾನ್ ಪ್ರಾಂತ್ಯದ ಛಾಂಗ್ಸಾ ಜೂನಲ್ಲಿ ನಡೆದಿದೆ.
ಮೊಲಗಳು, ಅಳಿಲು ಮತ್ತು ಗಿನಿಯಾ ಹಂದಿಗಳು ಸೇರಿದಂತೆ ಸುಮಾರು 200ಕ್ಕೂ ಅಧಿಕ ಪ್ರಾಣಿಗಳು ಮೃಗಾಲಯದಲ್ಲೇ ಸಿಲುಕಿಕೊಂಡಿದ್ದವು. ಆದರೆ, ಲಾಕ್ಡೌನ್ನಿಂದ ಆಹಾರ ಪೂರೈಕೆಯಾಗದೇ ಸಾವಿಗೀಡಾಗಿವೆ. ಅವುಗಳ ಮೃತದೇಹಗಳು ಹಾಗೇ ಇವೆ ಎಂದು ಜೂ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಾಣಿಗಳನ್ನು ಉಳಿಸಿಕೊಳ್ಳಲು ಜೂ ಸಿಬ್ಬಂದಿ ತಮ್ಮ ಸ್ವಂತ ಹಣದಿಂದಲೇ ಆಹಾರವನ್ನು ಪೂರೈಸಿದಾದರೂ ಅನೇಕ ಪ್ರಾಣಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಿಬ್ಬಂದಿಗೂ ಸಹ ಡಿಸೆಂಬರ್ನಿಂದ ಯಾವುದೇ ಸಂಬಳ ಕೂಡ ದೊರೆತಿಲ್ಲ. ಒಟ್ಟಾರೆ ಲಾಕ್ಡೌನ್ ಚೀನಾ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದ್ದು, ವಿಶ್ವದಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದಿದೆ. (ಏಜೆನ್ಸೀಸ್)