

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ವೇಗದ ಸ್ಪರ್ಶ ನೀಡಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
"ಜುಲೈ 1ರೊಳಗೆ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಸಂಸ್ಥೆಗೆ ಭೂಮಿಯ ಹಸ್ತಾಂತರ ಮಾಡಲಿದ್ದು, ಫಾಕ್ಸ್ ಕಾನ್ ಸಂಸ್ಥೆಯಿಂದ ಶೀಘ್ರವೇ ದೇವನಹಳ್ಳಿಯಲ್ಲಿ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ" ಎಂದು ಸಚಿವರು ಹೇಳಿದ್ದಾರೆ.
ಸದ್ಯ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಸಮರ ಆರಂಭವಾಗಿದ್ದು, "ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲು ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯ್ತು. ಫಾಕ್ಸ್‌ಕಾನ್ ಸಂಸ್ಥೆಯ ಐಫೋನ್ ತಯಾರಿಕಾ ಘಟಕಕ್ಕೆ ಭೂಮಿ ಒದಗಿಸಿ ಬಂಡವಾಳ ಹೂಡಿಕೆಗೆ ಒತ್ತು ನೀಡಲು ಸಜ್ಜಾಗಿದೆ ನಮ್ಮ ಸರ್ಕಾರ" ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
"ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಸಂಸ್ಥೆಯಿಂದ 50,000 ಉದ್ಯೋಗ ಸೃಷ್ಟಿ, ವಾರ್ಷಿಕ 20 ಮಿಲಿಯನ್ ಐಫೋನ್ ತಯಾರಿಕೆ, 1.7 ಬಿಲಿಯನ್ ಬಂಡವಾಳ ಹೂಡಿಕೆ ಆಗಲಿದೆ" ಎಂದು ಎಂ.ಬಿ ಪಾಟೀಲ್ ಅವರ ಅಧಿಕೃತ ಟ್ವಿಟರ್ ಖಾತೆ ಮಾಹಿತಿ ನೀಡಿದೆ.