ಬಿಬಿಎಂಪಿ ಅಧಿಕಾರಿಗಳ ಬುಡಕ್ಕೇ ಬರುತ್ತಿರುವ ಚಿಲುಮೆ ಹಗರಣ; ನಾಲ್ವರು ಆರ್‌ಓಗಳ ಬಂಧನ

bbmp
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಡೆದ ಮತದಾರರ ಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಲ್ಲಾ ಒಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿರುವ ಈ ಹಗರಣದಲ್ಲಿ ಖಾಸಗಿ ವ್ಯಕ್ತಿಗಳು ಮಾತ್ರವಲ್ಲ, ಸರ್ಕಾರಿ ನೌಕರರು ಕೂಡ ಅದರ ಬಿಸಿ ಅನುಭವಿಸುವಂತಾಗಿದೆ.

ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಬಿಬಿಎಂಪಿ ಅಧಿಕಾರಿಗಳ ಬುಡಕ್ಕೆ ಬರುತ್ತಿದೆ ಚಿಲುಮೆ ಹಗರಣ. ಇದಕ್ಕೆ ಸಾಕ್ಷಿಯೆಂಬಂತೆ ಹಲಸೂರು ಗೇಟ್ ಪೊಲೀಸರು ಬಿಬಿಎಂಪಿಯ ನಾಲ್ವರು ರೆವೆನ್ಯೂ ಆಫೀಸರ್‌ಗಳನ್ನು (ಆರ್ಓ) ಬಂಧಿಸಿದ್ದಾರೆ.

ಚಿಕ್ಕಪೇಟೆ ವಿಭಾಗದ ವಿ.ಬಿ. ಭೀಮಾಶಂಕರ್, ಶಿವಾಜಿನಗರ ವಿಭಾಗದ ಸೊಹೆಲ್ ಅಹಮದ್, ಮಹಾದೇವಪುರ ವಿಭಾಗದ ಚಂದ್ರಶೇಖರ್ ಹಾಗೂ ಆರ್ ಆರ್ ನಗರದ ಮಹೇಶ್ ಬಂಧಿತ ಆರ್​ಓಗಳು. ಬಿಎಲ್‌ಓ ಕಾರ್ಡ್‌ಗಳನ್ನು ಖಾಸಗಿಯವರಿಗೆ ಕೊಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ, ಆರ್​​ಓಗಳು ಖಾಸಗಿ ವ್ಯಕ್ತಿಗಳಿಗೆ ಓಎಲ್ಓ ಕಾರ್ಡ್ ನೀಡುವಂತಿಲ್ಲ. ಪ್ರಕರಣದ ತನಿಖೆಯ ವೇಳೆ ಈ ನಾಲ್ವರು ಆರ್​​ಓಗಳು ಬಿಎಲ್ಓ ಕಾರ್ಡ್ ಕೊಟ್ಟಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net