ನೆರೆಗೆ ನಾಲ್ವರು, 10 ಜಾನುವಾರು ಬಲಿ

madu bangarappa visit savayipaalya
ಶಿವಮೊಗ್ಗದ ಸವಾಯಿಪಾಳ್ಯದ ತುಂಗಾ ನೆರೆ ಹಾನಿಯನ್ನು ಸಚಿವ ಮಧು ಬಂಗಾರಪ್ಪ ಪರಿಶೀಲಿಸಿದರು. ಬಲ್ಕಿಷ್ ಬಾನು, ಆರ್.ಪ್ರಸನ್ನಕುಮಾರ್, ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಎಚ್.ಸಿ.ಯೋಗೇಶ್ ಇದ್ದರು.
Published on

ಶಿವಮೊಗ್ಗ: ನೆರೆ ಹಾವಳಿಗೆ ಜೂನ್‌ನಿಂದ ಇಲ್ಲಿವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇನ್ನೆರಡು ಪ್ರಕರಣದಲ್ಲಿ ಶೀಘ್ರವೇ ವಿತರಿಸಲಾಗುವುದು. 10 ಜಾನುವಾರುಗಳ ಜೀವಹಾನಿಯಾಗಿದ್ದು 8ಕ್ಕೆ ಪರಿಹಾರ ವಿತರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

1,540 ಹೆಕ್ಟೇರ್ ಭತ್ತ, 2,300 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಜಲಾವೃತಗೊಂಡಿದೆ. ಜಂಟಿ ಸರ್ವೇ ಬಳಿಕ ಹಾನಿ ಪ್ರಮಾಣ ತಿಳಿಯಲಿದೆ. 767 ವಿದ್ಯುತ್ ಕಂಬ, 16 ಟಿಸಿಗಳಿಗೆ ಹಾನಿಯಾಗಿದೆ. 41.63 ಕಿ.ಮೀ ರಾಜ್ಯ ಹೆದ್ದಾರಿ, 65.96 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ, 610.43 ಕಿ.ಮೀ ಗ್ರಾಮೀಣ ರಸ್ತೆ, 111 ಸೇತುವೆಗಳಿಗೆ ಹಾನಿಯಾಗಿದೆ. 381 ಶಾಲಾ ಕಟ್ಟಡ, 260 ಅಂಗನವಾಡಿ ಕಟ್ಟಡ ಹಾಗೂ 9 ಆರೋಗ್ಯ ಕೇಂದ್ರದ ಕಟ್ಟಡಗಳು ಹಾನಿಗೊಳಗಾಗಿವೆ ಎಂದರು.
ಅತಿವೃಷ್ಟಿಯಿಂದ 437 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 40 ಮನೆಗಳಿಗೆ ತಲಾ 1.70 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಅನಧಿಕೃತ ಮನೆಗಳಿಗೂ ಹಾನಿಯಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು ಅನಧಿಕೃತ ಮನೆಗಳಿಗೂ ಪೂರ್ಣ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.

ಪ್ರವಾಹದಿಂದ ಮುಳುಗಡೆ ಆಗಬಹುದಾದ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ. 103 ಕಾಳಜಿ ಕೇಂದ್ರ ತೆರೆಯಲು ಜಾಗ ಗುರುತಿಸಲಾಗಿದೆ. ಈಗಾಗಲೇ ತಾಳಗುಪ್ಪ ಹೋಬಳಿಯ ಮಂಡಗಳಲೆ ಗ್ರಾಮದಲ್ಲಿ ಮನೆಗೋಡೆಗಳು ಶಿಥಿಲಗೊಂಡಿದ್ದು ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲದೇ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡ ರಚಿಸಿದ್ದು ತುರ್ತು ಸಂದರ್ಭದಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. 15 ಜನರ ಎಸ್‌ಡಿಆರ್‌ಎಫ್ ತಂಡವನ್ನು ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net