ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿ: ಪತಿ-ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರ ದುರಂತ ಅಂತ್ಯ

Hassan Family
Published on

ಹಾಸನ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿಯಾಗಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾಗಿರುವ ದಾರುಣ ಘಟನೆ ಚನ್ನರಾಯಪಟ್ಟಣದ ನುಗ್ಗೆಹಳ್ಳಿ ಬಳಿಯ ಕಾರೆಹಳ್ಳಿಯಲ್ಲಿ ಶನಿವಾರ (ಫೆ.25) ತಡರಾತ್ರಿ ನಡೆದಿದೆ.

ಮೃತ ದಂಪತಿಯನ್ನು ಲೋಕೇಶ್​ ಆಚಾರಿ ಮತ್ತು ಲಕ್ಷ್ಮೀ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಕೂಡ ಅಸುನೀಗಿದ್ದಾರೆ. ಕಾರೇಹಳ್ಳಿ-ತಿಪಟೂರು ಮಾರ್ಗದಲ್ಲಿ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್​ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಲೋಕೇಶ್​ ಆಚಾರಿ ತನ್ನ ಪತ್ನಿ ಮತ್ತು ಮಕ್ಕಳನ್ನು ಹೊಸೂರು ಗ್ರಾಮದಿಂದ ಕರೆದುಕೊಂಡು ನವಿಲೆ ಗ್ರಾಮಕ್ಕೆ ತೆರಳುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನುಗ್ಗೆಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ವರ್ಗಾಯಿಸಲಾಗುತ್ತದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net