

ಇಂಫಾಲ್: ಚಾಲಕನ ನಿಯಂತ್ರಣ ತಪ್ಪಿ ಪಿಕ್ಅಪ್ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ ಚಾಲಕ ಸೇರಿದಂತೆ ನಾಲ್ಕು ಮಂದಿ ಮೃತಪಟ್ಟು, ಆರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯ ಪೊಯ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾರ್ಥಾ ಅಲುಂಗ್ನಾವೊ, ಯುರೆಚೊನ್ ನಿರೈ, ಮಜಂತೇಯಿ ಮಾಲುಕ್ಷೋ, ಪೀಸೆನಾವೊ ರೈಸಿಂಗ್ ಎಂದು ಗುರುತಿಸಲಾಗಿದ್ದು, ಶಾಂಗ್ರೆಹಾವೊ ಷಟ್ಸಂಗ್, ಶೋನ್ರೀಶನ್ ಮಾಲುಕ್, ನ್ಗಾಚಾನ್ವೊನ್ ರೊನ್ರಾ, ಚಿಹಾಂಗಮ್ ಬುಕ್ಲಿ, ಕಶಾಂಗ್ಮಿ ಶಿಮ್ರಾ ಮತ್ತು ನ್ಗಯೈಲಿ ಷಟ್ಸಂಗ್ ಗಾಯಗೊಂಡ ಆರು ಮಂದಿ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ರಸ್ತೆಯಲ್ಲಿ ಉಂಟಾಗಿದ್ದ ಹಳ್ಳವನ್ನು ತಪ್ಪಿಸಲು ಹೋದಾಗ ಪಿಕ್ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತರು ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಉಖ್ರುಲ್ನಿಂದ ಲಾಂಗ್ಪಿಗೆ ತೆರಳುತ್ತಿದ್ದರು. ಈ ವೇಳೆ ಪೊಯ್ ಗ್ರಾಮದ ಬಳಿ ಪ್ರಯಾಣಿಸುತ್ತಿದ್ದಾಗ ಹಳ್ಳ ತಪ್ಪಿಸಲು ಹೋಗಿ ಪಿಕ್ಅಪ್ ವಾಹನ ಕಂದಕಕ್ಕೆ ಉರುಳಿದ ಪರಿಣಾಮ ದುರಂತೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.