ಬಸ್, ಗೂಡ್ಸ್ ವಾಹನ ಡಿಕ್ಕಿಯಾಗಿ ನಾಲ್ವರಿಗೆ ಗಾಯ

21 HANUR 4
Published on

ಹನೂರು : ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದ ಬಳಿ ಗುರುವಾರ ಸಾರಿಗೆ ಬಸ್ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ.

ಗೂಡ್ಸ್ ವಾಹನದ ಚಾಲಕ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ನಂದನ್, ಈತನ ತಂದೆ ನಾಗನಾಯಕ, ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದ ಶ್ರೀಧರ್ ಹಾಗೂ ಹನೂರು ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದ ನಿಂಗರಾಜು ಗಾಯಗೊಂಡವರು.

ಯರಿಯೂರಿನ ನಾಗನಾಯಕ ಚನ್ನಾಲಿಂಗನಹಳ್ಳಿ ಭಾಗದ ಜಮೀನುಗಳಲ್ಲಿ ಎಳನೀರು ಖರೀದಿಸಿ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಮೂವರೊಂದಿಗೆ ಲೊಕ್ಕನಹಳ್ಳಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಚನ್ನಾಲಿಂಗನಹಳ್ಳಿ ಬಳಿ ಎದುರು ಬಂದ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಗೂಡ್ಸ್ ವಾಹನ ಜಖಂಗೊಂಡು ನಾಲ್ವರು ಗಾಯಗೊಂಡರು. ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ತಲೆ ಹಾಗೂ ಕಾಲಿಗೆ ತೀವ್ರ ಗಾಯವಾಗಿದ್ದ ನಿಂಗರಾಜು ಮತ್ತು ಶ್ರೀಧರ್ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

--------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net