

ವಿಜಯಪುರ: ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಬೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರನ್ನು ವಿಜಯಪುರ ಮೂಲದ ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಸುನಿಲಾಲ್ ಪತ್ತಾರ (52),
ಪುಷ್ಟಾ ರವಿನಾಥ ಪತ್ತಾರ (40), ಮೇಘರಾಜ ಅರ್ಜುನಸಿಂಗ್ ರಜಪೂತ (12) ಎಂದು ಗುರುತಿಸಲಾಗಿದೆ. ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA 28 D 1021 ನಂಬರಿನ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ.
ಜಮಖಂಡಿಯಿಂದ ಸಿಮೆಂಟ್ ಲೋಡ್ ತುಂಬಿದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳದಲ್ಲಿದ್ದ ಶವಗಳನ್ನು ಬಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಹಾಗೂ ಇತರ ಅಧಿಕಾರಿಗಳ ಭೇಟಿ ನೀಡಿದ್ದು, ಸ್ಥಳ ಪರಿಶೀಲಿಸುತ್ತಿದ್ದಾರೆ.