ನ.14ರಿಂದ 17ರವರೆಗೆ ನಾಲ್ಕು ದಿನ ಕೃಷಿ ಮೇಳ-2024

krishi mela pc
Published on

ಬೆಂಗಳೂರು: ವ್ಯವಸಾಯ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ನಿಖರ ಪರಿಹಾರವನ್ನು ರೈತರಿಗೆ ಒದಗಿಸುವ ನಿಟ್ಟಿನಲ್ಲಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ಗೆ ಒತ್ತು ನೀಡಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನ.14ರಿಂದ 17ರವರೆಗೆ ನಾಲ್ಕು ದಿನ ಕೃಷಿ ಮೇಳವನ್ನು ಆಯೋಜಿಸಿದೆ.

ಈ ಸಂಬಂಧ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ಮಾಹಿತಿ ನೀಡಿದರು.

ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಹೊಸ ತಂತ್ರಜ್ಞಾನ ಹಾಗೂ ತಾಂತ್ರಿಕತೆ ಮೂಲಕ ಬೆಳೆಗಳನ್ನು ರಕ್ಷಿಸಿಕೊಂಡು ಹೆಚ್ಚು ಆದಾಯ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಇದಕ್ಕಾಗಿ ಮೇಳದಲ್ಲಿ ರೈತರನ್ನು ಕೇಂದ್ರೀಕರಿಸಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೃಷಿಕರಲ್ಲಿ ಇನ್ನಷ್ಟು ತಜ್ಞತೆ ಬೆಳೆಸಲು ಡಿಜಿಟಲ್ ಕೃಷಿ ಮೂಲಕ ವಿವಿ ಸಂಶೋಧಿಸಿರುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರೈತರನ್ನೇ ಮೇಳದ ರಾಯಭಾರಿಗಳನ್ನಾಗಿ ಮಾಡಿಕೊಳ್ಳಲಾಗುವುದು ಎಂದರು.

ಜಾನುವಾರು ಪ್ರದರ್ಶನದ ಆಕರ್ಷಣೆ:

ಪ್ರಸ್ತುತ ಸನ್ನಿವೇಶದಲ್ಲಿ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಇದಕ್ಕಾಗಿ ವ್ಯವಸಾಯದ ಜತೆಗೆ ಉಪಕಸುಬನ್ನು ಬಳಸಿಕೊಳ್ಳಬೇಕಿದೆ. ಹೈನುಗಾರಿಕೆ ಹೊರತುಪಡಿಸಿ ಪಶುಸಂಗೋಪನೆ, ಕುಕ್ಕುಟೋದ್ಯಮ, ಮೀನು ಸಾಕಣೆ, ಜೇನು ಸಾಕಣೆ, ಗೊಬ್ಬರ ತಯಾರಿಕೆ ಇತ್ಯಾದಿ ಚಟುವಟಿಕೆಯನ್ನು ಹೊಸ ವಿಧಾನದಲ್ಲಿ ಕೈಗೊಳ್ಳುವಂತಹ ಮಾದರಿಯನ್ನು ಪ್ರದರ್ಶಿನಿಯಲ್ಲಿ ತಿಳಿಸಿಕೊಡಲಾಗುತ್ತದೆ. ಇದು ನಗರವಾಸಿಗಳಿಗೆ ಅನುಕೂಲವಾಗುವ ಕಾರಣ ಹೆಚ್ಚಿನ ಮಳಿಗೆಗಳನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.

ಯಂತ್ರಗಳ ಪ್ರದರ್ಶನಕ್ಕೂ ಆದ್ಯತೆ:

ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದರಿಂದ ಕೂಲಿಯಾಳುಗಳ ಸಮಸ್ಯೆ ನೀಗಿಸಿಕೊಳ್ಳುವ ಜತೆಗೆ ಸಮಯ ಉಳಿತಾಯವಾಗಲಿದೆ. ಈ ವಿಧಾನಕ್ಕೆ ರೈತರಿಂದ ಬೇಡಿಕೆ ಇದ್ದು, ಪ್ರದರ್ಶನದಲ್ಲಿ ಹೊಸ ಬಗೆಯ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗೆ ಆದ್ಯತೆ ನೀಡಲಾಗಿದೆ. ಕೃಷಿ ಬಾಟ್ ಸುಧಾರಿತ ಬಿತ್ತನೆ ತಂತ್ರಜ್ಞಾನದ ಮೂಲಕ ಪ್ರತಿ ಬೀಜವನ್ನು ಗರಿಷ್ಠ ಆಳದಲ್ಲಿ ನೆಡುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ಈ ವಿಧಾನದಲ್ಲಿ ಬೀಜಗಳನ್ನು ನೆಡುವುದಲ್ಲದೇ ಗೊಬ್ಬರವನ್ನು ಪರಿಣಾಮಕಾರಿಯಾಗಿ ಬೆಳೆಗಳಿಗೆ ಒದಗಿಸಲು ಸಹಾಯವಾಗುತ್ತದೆ ಎಂದರು.

ಈ ವರ್ಷ ಸ್ಥಳೀಯ ಜಾನುವಾರುಗಳ ಪ್ರದರ್ಶನಕ್ಕೆ ಒತ್ತು ನೀಡಲಾಗುವುದು. ಕೋಳಿ, ಕುರಿ, ಮೇಕೆ ಇತ್ಯಾದಿಗಳನ್ನು ಪ್ರದರ್ಶಿಸಲಾಗುವುದು. ಕಳೆದ ವರ್ಷ ಸುಮಾರು 17 ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದುಘಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ರಾಜ್ಯದ ನಾನಾ ಭಾಗಗಳಿಂದ ಮೇಳಕ್ಕೆ ರೈತರನ್ನು ಕರೆತರಲು ಹಲವು ಕೃಷಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಕೃಷಿಯಲ್ಲೂ ಡಿಜಿಟಲ್ ಸೂತ್ರವನ್ನು ಅಳವಡಿಸುವ ಮೂಲಕ ಕೃಷಿಕರನ್ನು ಬಾಧಿಸುತ್ತಿರುವ ಕೂಲಿ ಕಾರ್ಮಿಕರ ಕೊರತೆ ನೀಗಿಸುವುದು, ಖರ್ಚು ಕಡಿಮೆ ಮಾಡುವುದು ಇತ್ಯಾದಿ ಡಿಜಿಟಲ್ ಕೃಷಿ ಪೂರಕವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಯ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್, ಸಂಶೋಧನಾ ನಿರ್ದೇಶಕ ಡಾ. ಎಚ್.ಎಸ್.ಶಿವರಾಮು, ತರಬೇತಿ ಸಂಯೋಜಕ ಡಾ. ಕೆ.ಶಿವರಾಮು ಮತ್ತಿತರರಿದ್ದರು.

700 ಮಳಿಗೆ, ಹೊಸ ತಳಿಗಳ ಬಿಡುಗಡೆ:

ಕೃಷಿ ಮೇಳ-2024ರಲ್ಲಿ ಅಂದಾಜು 700 ಮಳಿಗೆಗಳನ್ನು ತೆರೆಯಲಾಗುವುದು. ಇದರಲ್ಲಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಪ್ರದರ್ಶಿನಿಗಳೂ ಇರಲಿವೆ. ಗ್ರಾಮೀಣ ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು, ನವೋದ್ಯಮಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಪ್ರತಿ ಬಾರಿಯಂತೆ ಈ ವರ್ಷವೂ ವಿವಿಯಿಂದ ಸಂಶೋಧನೆಯಾಗಿರುವ ವಿವಿಧ ಬೆಳೆಗಳ ಹೊಸ ತಳಿಗಳನ್ನು ರೈತರಿಗಾಗಿ ಬಿಡುಗಡೆ ಮಾಡಲಾಗುವುದು. ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಮುಸುಕಿನ ಜೋಳ ಸಂಕರಣ ತಳಿ, ಸೂರ್ಯಕಾಂತಿ, ಬಾಜ್ರಾ ನೇಪಿಯರ್, ಅಲಸಂದೆ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಇವುಗಳನ್ನು ಮೇಳದಲ್ಲಿ ಮುಖ್ಯಮಂತ್ರಿ ಬಿಡುಗಡೆ ಮಾಡಲಿದ್ದಾರೆ ಎಂದು ಕುಲಪತಿಯವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net