ಕಳ್ಳತನ ಶಂಕೆ; ಅಪ್ರಾಪ್ತ ವಯಸ್ಕರನ್ನು ಅಮಾನುಷವಾಗಿ ಥಳಿಸಿದ ದುರುಳರು

Assault
Published on

ಮುಂಬೈ: ತಮ್ಮ ಹೊಲದಲ್ಲಿ ಸಾಕಲಾಗಿದ್ದ ಮೇಕೆ ಹಾಗೂ ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಶಂಕೆಯ ಮೇರೆಗೆ ಯುವಕರ ಗುಂಪೊಂದು ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಬಾಲಕರನ್ನು ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲೆಯ ಶ್ರೀರಾಮ್​ಪುರ ತಾಲ್ಲೂಕಿನಲ್ಲಿ ನಡೆದಿದೆ.

ಘಟನೆಯು ಶ್ರೀರಾಮ್​ಪುರ ತಾಲ್ಲೂಕಿನ ಹರೇಗಾಂವ್​ ಎಂಬ ಗ್ರಾಮದಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

ಹೊಸದೇನೂ ಅಲ್ಲ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಾ.ಬಿ.ಆರ್​. ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್​ ಅಂಬೇಡ್ಕರ್​ ಕಳ್ಳತನ ಶಂಕೆ ಮೇಲೆ ನಾಲ್ವರು ಬಾಲಕರನ್ನು ಅಮಾನುಷವಾಗಿ ಥಳಿಸಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ. ಹಲ್ಲೆ ನಡೆಸಿದ ದುರುಳರು ತಮ್ಮ ಎಂಜಲನ್ನು ಸಹ ನೆಕ್ಕುವಂತೆ ಮಾಡಿದ್ದಾರೆ. ಈ ರೀತಿ ಅಮಾನವೀಯ ಕೃತ್ಯಗಳನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ.

ಈ ಜಾತಿ ತಾರತಮ್ಯ, ಬಹಿಷ್ಕಾರ, ನಿಂದನೆ, ಅವಮಾನ, ಹಿಂಸಾಚಾರ ಮತ್ತು ಕ್ರೌರ್ಯ ಹೊಸದೇನೂ ಅಲ್ಲ, ಸರಕಾರದ ಉದಾಸೀನತೆಯೂ ಅಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ವಿಚಾರ ಬೇಳಕಿಗೆ ಬರುತ್ತಿದ್ದಂತೆ ಬಾಲಕರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್​ ಸಂತ್ರಸ್ತರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ರೀತಿಯ ಹೇಯ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವ ಮಾತಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net