

ಆನಂದಪುರ: ಗ್ರಾಮ ದೇವತೆ ಶ್ರೀ ಕಡ್ಲೆಹಂಕ್ಲು ಮಾರಿಕಾಂಬೆ ತವರು ಮನೆಗೆ ಶಿಲಾಮಯ ದೇವಾಲಯ ನಿರ್ಮಿಸಲು ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಅಶೋಕ ರಸ್ತೆಯ ತಿರುವಿನಲ್ಲಿರುವ ಹಳೆಯ ಗುಡಿಯ ಸ್ಥಳದಲ್ಲಿ ನೂತನ ಮಂದಿರ ನಿರ್ಮಿಸಲು ಮಾರಿಕಾಂಬಾ ದೇವಿ ಸೇವಾ ಸಮಿತಿ ನಿರ್ಧರಿಸಿದೆ. ಅಧ್ಯಕ್ಷ ಎಲ್.ವೆಂಕಟೇಶ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸುತ್ತಮುತ್ತಲ 32 ಗ್ರಾಮಗಳಿಗೆ ಒಳಪಡುವ ಈ ದೇಗುಲ ನಿರ್ಮಾಣಕ್ಕೆ ಸುಮಾರು 1.30 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕೆ ಸಾರ್ವಜನಿಕರು, ದಾನಿಗಳ ಸಹಕಾರ ಮುಖ್ಯ ಎಂದರು.
2026ರ ಮಾರಿಕಾಂಬಾ ಜಾತ್ರೆ ವೇಳೆಗೆ ದೇಗುಲ ನಿರ್ಮಾಣ ಕಾರ್ಯ ಮುಗಿಯುವ ವಿಶ್ವಾಸವಿದೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಶಿಲ್ಪಿ ನಾಗೇಶ ಅವರು ದೇವಾಲಯ ನಿರ್ಮಾಣ ಕಾಮಗಾರಿ ನಡೆಸಲಿದ್ದಾರೆ ಎಂದರು. ದೇವಾಲಯ ಸಮಿತಿಯ ಎಲ್ಲ ಸದಸ್ಯರು, ಮಾರಿಕಾಂಬಾ ದೇವಾಲಯದ ಸಾಂಪ್ರದಾಯಿಕ ತವರು ಮನೆ ಮತ್ತು ಗಂಡನ ಮನೆ ಕುಟುಂಬದ ಪ್ರತಿನಿಧಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.