ಮಂಡ್ಲಿ ಶಿಲಾಮಯ ಕಟ್ಟಡ ಶಂಕುಸ್ಥಾಪನೆ 11ಕ್ಕೆ

Veerabhadreshwara Swamy temple
ಮಂಡ್ಲಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಎಚ್.ವಿ.ಮಹೇಶ್ವರಪ್ಪ ಮಾತನಾಡಿದರು.
Published on

ಶಿವಮೊಗ್ಗ: ನಗರದ ಮಂಡ್ಲಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಯ ಕಟ್ಟಡ ನಿರ್ಮಾಣ ಕಾರ್ಯದ ಶಂಕುಸ್ಥಾಪನಾ ಕಾರ್ಯಕ್ರಮ ಹಾಗೂ ಧರ್ಮಸಭೆಯನ್ನು ಮೇ 11ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಎಚ್.ವಿ.ಮಹೇಶ್ವರಪ್ಪ ಹೇಳಿದರು.

ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶಂಕುಸ್ಥಾಪನೆ ನೆರವೇರಿಸುವರು. ಬೆಳಗ್ಗೆ 11ಕ್ಕೆ ಧರ್ಮಸಭೆ ನಡೆಯಲಿದ್ದು, ವಿವಿಧ ಮಠಗಳ ಮಠಾಧೀಶರು ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಇತರ ಗಣ್ಯರು ಭಾಗವಹಿಸುವರು ಎಂದರು.

ಮಂಡ್ಲಿ ಶ್ರೀ ವೀರಭದ್ರ ದೇವರ ದೇವಸ್ಥಾನವು ಅತ್ಯಂತ ಪುರಾತನವಾದುದು. ಕೆಳದಿ ಅರಸ ಶಿವಪ್ಪನಾಯಕ ಈ ದೇವಸ್ಥಾನವನ್ನು ಕಟ್ಟಿಸಿದ್ದರು ಎಂಬುದು ದಾಖಲೆಗಳಲ್ಲಿದೆ. ಮೂಲದ ಪ್ರಕಾರ ಮಂಡಲೇಶ್ವರ ದೇವಸ್ಥಾನ ಗುಂಡುತೋಪು ಆವರಣದಲ್ಲಿ ಇಮ್ಮಡಿ ಸೋಮಶೇಖರ ನಾಯಕರ ಮತ್ತು ಅವರ ರಾಣಿಯವರ ಗದ್ದುಗೆ ಕೂಡ ಇದೆ ಎಂದು ಹೇಳಿದರು.

ಮಂಡ್ಲಿ ಹೆಸರೇ ಸೂಚಿಸುವಂತೆ ಪ್ರಾಚೀನ ಕಾಲದಲ್ಲಿ ಇದು ಒಂದು ದೊಡ್ಡ ರಾಜಧಾನಿ. ಕೆಳದಿ ಅರಸೊತ್ತಿಗೆಯ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿ ಆರಾಧನೆಯೇ ಬಹಳ ಅಗ್ರಮಾನ್ಯ ಪಡೆದಿದ್ದು, ತದನಂತರ ಈ ದೇವಸ್ಥಾನದ ಜವಾಬ್ದಾರಿಯನ್ನು ಮಂಡ್ಲಿಯ ಗ್ರಾಮಸ್ಥರು ನಿರ್ವಹಿಸುತ್ತ ಪೂಜಾ ಕೈಂಕರ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದರು.

ಸಮಿತಿ ಅಧ್ಯಕ್ಷ ಎಸ್.ಎಂ.ಮೇಘರಾಜ, ಉಪಾಧ್ಯಕ್ಷ ಎಂ.ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿವಾಕರ, ಖಜಾಂಚಿ ಎಂ.ಜಿ.ಗಿರೀಶ್, ಪ್ರಮುಖರಾದ ಆರ್.ಉಮಾಕಾಂತ, ಎಲ್.ಎಂ.ಮೋಹನಕುಮಾರ್, ಗಂಗಾಧರ, ರೇಣುಕಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net