ರಸ್ತೆ ಹಾನಿ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಿ: ಡಿಸಿ

road meeting
ಗುರುದತ್ತ ಹೆಗಡೆ ಗುರುವಾರ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿದರು. ಎ.ಎಸ್.ಕಾರಿಯಪ್ಪ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪಂಚಾಯತ್‌ರಾಜ್ ಮತ್ತು ಪಿಡಬ್ಲುೃಡಿ ವ್ಯಾಪ್ತಿಯ ರಸ್ತೆಗಳು ಹಾಗೂ ಗುಡ್ಡಗಾಡು, ಕಡಿದಾದ ತಿರುವು ಪ್ರದೇಶಗಳಲ್ಲಿ ಭೂಕುಸಿತ ಮತ್ತಿತರ ಕಾರಣಗಳಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಕ್ರಿಯೆ ಯೋಜನೆ ರೂಪಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿ ಸಭೆ ನಡೆಸಿದ ಅವರು, ಪ್ರಸ್ತಾವನೆಗಳನ್ನು ತಯಾರಿಸುವ ಪೂರ್ವದಲ್ಲಿ ಆಯಾ ಇಲಾಖೆಗಳ ಅಭಿಯಂತರರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಛಾಯಾಚಿತ್ರಗಳೊಂದಿಗೆ ಕ್ರಿಯಾಯೋಜನೆ ತಯಾರಿಸಬೇಕೆಂದರು.
ವಿಶೇಷವಾಗಿ ಅಹಿತಕರ ಘಟನೆಗಳು ಸಂಭವಿಸುವ ಸ್ಥಳಗಳು, ಸಂಚಾರ ದಟ್ಟಣೆಯಿಂದ ಅಡಚಣೆಗೊಳಗಾಗುತ್ತಿರುವ ರಸ್ತೆಗಳ ಬಗ್ಗೆ ಗಮನಹರಿಸಿ, ವರ್ತುಲಗಳು, ಕಡಿದಾದ ತಿರುವುಗಳು, ತಡೆಗೋಡೆಗಳು, ಪರ್ಯಾಯ ಮಾರ್ಗಗಳು, ಅಗಲೀಕರಣ ಮುಂತಾದವುಗಳನ್ನು ನಿರ್ಮಿಸಲು ಸಲಹೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಅಂತಹ ಸಂಭಾವ್ಯ 356 ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವ ಸಮಯದಲ್ಲಿ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಅವರು ಭೂಕುಸಿತ ಅಧ್ಯಯನ ವರದಿಗಳಲ್ಲಿ ಸೂಚಿಸಿರುವಂತೆ ಮಾರ್ಗಸೂಚಿಗಳನ್ನು ಹಾಗೂ ತಜ್ಞರ ವರದಿ ಮತ್ತು ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಗುಣವಾಗಿ 100ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲು ಉದ್ದೇಶಿಸಿದೆ ಎಂದರು.
ರಾಜ್ಯದ ಕರಾವಳಿ ವತ್ತು ಮಲೆನಾಡು ಜಿಲ್ಲೆಗಳಲ್ಲಿ ಭೂಕುಸಿತ ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಎಸ್ಪಿ, ಜಿಪಂ ಸಿಇಒ ಅರಣ್ಯಾಧಿಕಾರಿ ಸೇರಿದಂತೆ 13 ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿ ರಚಿಸುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ವಿಭಾಗದ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.
ಜಿಪಂ ಸಿಇಒ ಎನ್.ಹೇಮಂತ್, ಎಎಸ್ಪಿ ಎ.ಎಸ್.ಕಾರಿಯಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net