ಡೀಮ್ಡ್ ಅರಣ್ಯ ಅಭಿವೃದ್ಧಿ ರಕ್ಷಣಾ ಯೋಜನೆ ರೂಪಿಸಿ

annath hegde
ಅನಂತ ಹೆಗಡೆ ಆಶೀಸರ
Published on

ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಡೀಮ್ಡ್ ಕಂದಾಯ ಅರಣ್ಯಗಳ ಕಬಳಿಕೆ, ಅರಣ್ಯ ನಾಶ ಆಗುತ್ತಲೇ ಇದ್ದು, ರಾಜ್ಯ ಸರ್ಕಾರ ಕೂಡಲೇ ಡೀಮ್ಡ್ ಅರಣ್ಯ ಅಭಿವೃದ್ಧಿ ರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕೆಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮನವಿ ಮಾಡಿದರು.
2022ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಕೇವಲ 3.3 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಇದೆ ಎಂದು ಘೋಷಿಸಿದೆ. ಡೀಮ್ಡ್ ಅರಣ್ಯ ರಕ್ಷಣೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಕ್ರಿಯಾಯೋಜನೆ ರೂಪಿಸಲಿದೆ ಎಂದು ಆದೇಶದಲ್ಲಿ ಅಫಿಡೆವಿಟ್‌ನಲ್ಲಿ ಅಧಿಕೃತವಾಗಿ ಸರ್ಕಾರ ಪ್ರಕಟಪಡಿಸಿದೆ. ಆದರೆ ಈವರೆಗೆ ಅಂಥ ಯೋಜನೆ ರೂಪಿಸಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸೊರಬದ ಉದ್ರಿಯ ಮಲೆನಾಡು ಕೆರೆ ಸಮಾವೇಶದಲ್ಲಿ ಮಲೆನಾಡಿನ 4 ಸಾವಿರ ಕೆರೆಗಳ ಅತಿಕ್ರಮಣ ತೆರವು ಮಾಡಲು ಕಾಲಮಿತಿಯ ಕಾರ್ಯಾಚರಣೆಗೆ ಜಿಲ್ಲಾಡಳಿತಗಳು ಮುಂದಾಗಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸಾಗರ ತಾಲೂಕು ತಾಳಗುಪ್ಪ ಹೋಬಳಿಯ 5 ಗ್ರಾಮಗಳಲ್ಲಿ ಕಾನು ಅರಣ್ಯಗಳು ಒಟ್ಟು 2 ಸಾವಿರ ಎಕರೆ ಪ್ರದೇಶ ಹೊಂದಿದೆ. ಸ್ಥಾಪಿತ ಹಿತಾಸಕ್ತಿಗಳು ಕಾನು ಅರಣ್ಯ ಭೂಮಿ ಕಬಳಿಸುವ ಕೃತ್ಯಗಳಲ್ಲಿ ತೊಡಗಿದ್ದಾರೆ. ಇವುಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಪೂರ್ಣ ತಡೆಹಾಕುವಂತೆ ಆಗ್ರಹಿಸಿದರು.
ಮಲೆನಾಡು ಬರದ ನಾಡಾಗುತ್ತಿದೆ. ಭೂಕುಸಿತ ಹೆಚ್ಚುತ್ತಿದೆ. ಘಟ್ಟದ ನದಿಗಳು ಸಾಯುತ್ತಿವೆ. ನಾಡಿಗೆ ನೀರುಣಿಸುವ ಹೊಳೆ-ಹಳ್ಳ, ಕೆರೆಗಳನ್ನು ಉಳಿಸಲು ಇಲ್ಲಿನ ನದಿ ಕಣಿವೆಗಳ ಕಂದಾಯ ಅರಣ್ಯಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಜಾರಿಗೆ ತರಬೇಕು. ಕಂದಾಯ, ಅರಣ್ಯ ಕಾಯ್ದೆಗಳ ಕಟ್ಟುನಿಟ್ಟಿನ ಪಾಲನೆ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರ, ವನವಾಸಿಗಳ ಸಹಭಾಗಿತ್ವದ ಸಮಗ್ರ ಅರಣ್ಯ ನೀತಿ ರೂಪಿಸಬೇಕು ಎಂದು ಹೇಳಿದರು.
ಮಲೆನಾಡಿನ ಮಂಗನ ಕಾಯಿಲೆಗೆ ಕ್ರಮ ಕೈಗೊಳ್ಳಬೇಕು. ಅತಿಯಾದ ಕೀಟನಾಶಕ ಬಳಕೆ ತಡೆಗಟ್ಟಬೇಕು. ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಜಲಮಾಲಿನ್ಯ ತಡೆಯಬೇಕು. ಹೈಕೋರ್ಟ್‌ನಲ್ಲಿರುವ ಅರಣ್ಯ ಮೊಕದ್ದಮೆಗಳಲ್ಲಿ ಸರಿಯಾದ ವಾದ ಮಂಡಿಸದೇ ಘಟ್ಟದ ಅರಣ್ಯಗಳು ಖಾಸಗಿಯವರ ಪಾಲಾಗುತ್ತಿದೆ. ಅರಣ್ಯ ಇಲಾಖೆ ಬಲವಾದ ವಾದ ಮಂಡಿಸಿ ಅರಣ್ಯ ಭೂಮಿ ರಕ್ಷಿಸಬೇಕು. ಭೀಮಸೇತು, ಹಗಲತ್ತಿ, ಕಟ್ಟೆಕೊಪ್ಪ ಇನ್ನಿತರ ಒಟ್ಟೂ 10 ನ್ಯಾಯಾಲಯ ಪ್ರಕರಣಗಳಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿಯ ಅಳಿವು ಉಳಿವಿನ ಪ್ರಶ್ನೆ ಇದೆ ಎಂದರು.
ಪ್ರಮುಖರಾದ ಪ್ರೊ. ಬಿ.ಎಂ.ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net