ಡೊನಾಲ್ಡ್ ಟ್ರಂಪ್ ಸುಂಕ ನೀತಿ: ಅಮೆರಿಕ-ಭಾರತ ಸಂಬಂಧಗಳಿಗೆ ದೊಡ್ಡಹೊಡೆತ ಎಂದ ಮಾಜಿ ಆರ್‌ಬಿಐ ಗವರ್ನರ್| Raghuram Rajan

Raghuram rajan 28
Published on

Raghuram Rajan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ರಷ್ಟು ಸುಂಕ ನೀತಿಯು ಅಮೆರಿಕ-ಭಾರತ ಸಂಬಂಧಗಳಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಗುರುವಾರ (ಆಗಸ್ಟ್​,28) ಹೇಳಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜನ್, ಈ ಸುಂಕವು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ವಿಧಿಸಲಾಗಿದ್ದು, ಇದು ಎರಡು ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ರಾಜನ್​ ಎಚ್ಚರಿಕೆ ನೀಡಿದ್ದಾರೆ.

ಈ ಸುಂಕವು ಭಾರತದ ರಫ್ತುದಾರರಿಗೆ, ವಿಶೇಷವಾಗಿ ರತ್ನಗಂಬಂಗಿಳ, ಜವಳಿ, ಸಮುದ್ರ ಆಹಾರ ಮತ್ತು ಎಂಎಸ್‌ಎಂಇ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ರಾಜನ್, ಭಾರತವು ತನ್ನ ವ್ಯಾಪಾರ ನೀತಿಗಳನ್ನು ಜಾಗರೂಕವಾಗಿ ನಿರ್ವಹಿಸಬೇಕು ಮತ್ತು ಇತರ ದೇಶಗಳಾದ ಆಸಿಯಾನ್, ಜಪಾನ್, ಆಫ್ರಿಕಾ, ಮತ್ತು ಯುರೋಪ್​ಗಳಲ್ಲಿ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಮೂಲಕ ಈ ಸವಾಲನ್ನು ಎದುರಿಸಬೇಕು ಎಂದು ಭಾರತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರಷ್ಯಾ ತೈಲ ಆಮದು ನೀತಿಯನ್ನು ಭಾರತ ಮರುಪರಿಶೀಲಿಸಬೇಕು: ರಾಜನ್

ಭಾರತವು ರಷ್ಯಾದಿಂದ ತೈಲ ಆಮದು ನೀತಿಯನ್ನು ಮರುಪರಿಶೀಲಿಸಬೇಕು ಎಂದು ರಾಜನ್ ಸಲಹೆ ನೀಡಿದ್ದಾರೆ. ರಷ್ಯಾದಿಂದ ತೈಲ ಆಮದು ಭಾರತಕ್ಕೆ ಕಡಿಮೆ ವೆಚ್ಚದ ಆಯ್ಕೆಯಾಗಿದ್ದರೂ, ಇದು ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ, ವಿಶೇಷವಾಗಿ ಅಮೆರಿಕದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ರಾಜನ್​ ಎಚ್ಚರಿಕೆ ನೀಡಿದ್ದಾರೆ.

ಭಾರತವು ತನ್ನ ಶಕ್ತಿ ಪೂರೈಕೆಯನ್ನು ವೈವಿಧ್ಯಗೊಳಿಸಬೇಕು ಮತ್ತು ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪರ್ಯಾಯ ದೇಶಗಳಿಂದ ತೈಲ ಆಮದಿಗೆ ಗಮನ ನೀಡಬೇಕು. ಇದು ಭಾರತಕ್ಕೆ ಆರ್ಥಿಕ ಸ್ಥಿರತೆಯನ್ನು ಒದಗಿಸುವುದರ ಜತೆಗೆ, ಅಂತರರಾಷ್ಟ್ರೀಯ ಒತ್ತಡಗಳಿಂದ ರಕ್ಷಣೆ ನೀಡಬಹುದು. ಈ ನೀತಿ ಮರುಪರಿಶೀಲನೆಯು ಭಾರತಕ್ಕೆ ತನ್ನ ವಿದೇಶಿ ವ್ಯಾಪಾರ ಮತ್ತು ಕಾರ್ಯತಂತ್ರವನ್ನು ಬಲಪಡಿಸಲು ಎಚ್ಚರಗೊಳ್ಳುವ ಸಮಯ ಎಂದು ರಾಜನ್ ಒತ್ತಿ ಹೇಳಿದ್ದಾರೆ.

ಟ್ರಂಪ್ ಹೆಚ್ಚುವರಿ 25% ಸುಂಕ ಜಾರಿಗೆ ಬಂದಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.25 ಹೆಚ್ಚುವರಿ ಸುಂಕವನ್ನು ಆಗಸ್ಟ್ 27ರಿಂದ ಜಾರಿಗೆ ಬಂದಿದೆ. ಇದರಿಂದ ಒಟ್ಟು ಸುಂಕವು ಶೇ.50 ತಲುಪಿದೆ.ಇದು ಅಮೆರಿಕ ವಿಧಿಸಿದ ಅತ್ಯಧಿಕ ಸುಂಕ ಮತ್ತು ಬ್ರೆಜಿಲ್ ಮತ್ತು ಚೀನಾಕ್ಕೆ ಸಮನಾಗಿರುತ್ತದೆ.

ಹೊಸ ಸುಂಕಗಳು ಗುಜರಾತ್ ಸೇರಿದಂತೆ ಭಾರತದಲ್ಲಿ ಸಾವಿರಾರು ಸಣ್ಣ ರಫ್ತುದಾರರು ಮತ್ತು ಉದ್ಯೋಗಗಳಿಗೆ ಅಪಾಯ ಉಂಟುಮಾಡುತ್ತದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಬೆಳವಣಿಗೆಗೆ ಹಾನಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net