ದೋಸ್ತಿ ಬಹುಕಾಲ ಉಳಿಯಲಿದೆ

bhr jds sabhe
ಬಾಳೆಹೊನ್ನೂರಲ್ಲಿ ಏರ್ಪಡಿಸಿದ್ದ ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಡಿ.ಎನ್.ಜೀವರಾಜ್, ಕೆ.ಆರ್.ದೀಪಕ್, ಭಾಸ್ಕರ್ ವೆನಿಲ್ಲಾ, ಪ್ರಭಾಕರ್, ಟಿ.ಎಂ.ಉಮೇಶ್ ಇತರರಿದ್ದರು.
Published on

ಬಾಳೆಹೊನ್ನೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಾದ ಬಿಜೆಪಿ-ಜೆಡಿಎಸ್ ಮೈತ್ರಿ ಬಹುಕಾಲ ನಿಲ್ಲುವಂತಹದ್ದು. ಇದು ಕರ್ನಾಟಕದ ರಾಜಕೀಯದ ದಿಕ್ಕು ದೆಸೆಗಳನ್ನೆ ಬದಲಿಸಲಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ದೇವೇಗೌಡರ ಸುದೀರ್ಘ ಕಾಲದ ರಾಜಕೀಯದ ಅನುಭವ ಮತ್ತು ಮಾರ್ಗದರ್ಶನ ಈ ಮೈತ್ರಿಗೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ದೇವೇಗೌಡ ಅವರನ್ನು ಗೌರವಿಸುವ ಕಾರಣದಿಂದಾಗಿ ಈ ಮೈತ್ರಿ ಕಾಲಕಾಲಕ್ಕೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಈ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತಿದೆ. ಮೈತ್ರಿ ಏರ್ಪಡುವುದಕ್ಕೂ ಮುನ್ನ ಇದ್ದ ಸಣ್ಣಪುಟ್ಟ ಮನಸ್ತಾಪಗಳನ್ನು ಎರಡೂ ಪಕ್ಷದ ಕಾರ್ಯಕರ್ತರು ಬದಿಗೊತ್ತಬೇಕು. ದೇಶದ ಹಿತಾಸಕ್ತಿಗಾಗಿ ಈ ಚುನಾವಣೆಯಲ್ಲಿ ಒಂದಾಗಿ ಮೈತ್ರಿಕೂಟದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸುವ ಜವಾಬ್ದಾರಿ ಎರಡೂ ಪಕ್ಷದ ಮೇಲಿದೆ ಎಂದರು.
ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಕೆ.ಆರ್.ದೀಪಕ್ ಮಾತನಾಡಿ, ಪಕ್ಷದ ಹಿರಿಯರ ನಿರ್ಧಾರ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೋಲಿಸಲು ಪಣ ತೊಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಭಾಸ್ಕರ್ ವೆನಿಲ್ಲಾ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ಪಿಎಸಿಎಸ್ ನಿರ್ದೇಶಕ ಕೆ.ಟಿ.ವೆಂಕಟೇಶ್, ತಾಲೂಕು ಬಿಜೆಪಿ ವಕ್ತಾರ ಬಿ.ಜಗದೀಶ್ಚಂದ್ರ, ಬಾಳೆಹೊನ್ನೂರು- ಖಾಂಡ್ಯ ಘಟಕದ ಜೆಡಿಎಸ್ ಅಧ್ಯಕ್ಷ ಕೆ.ಟಿ.ಗೋವಿಂದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net