

ಬೆಂಗಳೂರು: ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ಸದನದ ಒಳಗೆ, ಹೊರಗೆ ಕುಮಾರಸ್ವಾಮಿ ಜತೆಗೂಡಿ ಹೋರಾಡಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದು, ಮೈತ್ರಿಯು ಚುನಾವಣೆಗೆ ಸೀಮಿತವಲ್ಲವೆಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕ ಆರ್.ಅಶೋಕ್ ಹೇಳಿದರು.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಎಚ್.ಡಿ.ದೇವೇಗೌಡರನ್ನು ಶನಿವಾರ ಭೇಟಿ ಮಾಡಿ ಹೂಗುಚ್ಛ ನೀಡಿದರು. ಇದೇ ಸಂದರ್ಭದಲ್ಲಿ ಆರ್.ಅಶೋಕ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ ದೇವೇಗೌಡರು ಆಶೀರ್ವದಿಸಿ, ಶುಭ ಹಾರೈಸಿದರು.
ನಂತರ ಸುದ್ದಿಗಾರರೊಂದಿಗೆ ಆರ್.ಅಶೋಕ್ ಮಾತನಾಡಿ ನೀವು ಕುಮಾರಸ್ವಾಮಿ ಒಟ್ಟಾಗಿ ಮೋದಿಯವರಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ದೇವೇಗೌಡರು ಸಲಹೆ ನೀಡಿ, ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.
ಮೈತ್ರಿ ವಿಚಾರವು ಲೋಕಸಭೆ ಚುನಾವಣೆಗೆ ಸೀಮಿತವಾಗಿಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಸದನದ ಒಳಗೆ, ಹೊರಗೆ ಒಟ್ಟಾಗಿ ಹೋರಾಟ ಮಾಡಲು ದೇವೇಗೌಡರು ಸೂಚಿಸಿದ್ದು, ಇದೇ ವೇಳೆ ಸಚಿವ ಜಮೀರ್ ಅಹಮದ್ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.
ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಆರ್.ಅಶೋಕ್ ಅವರು ಶನಿವಾರ ಬಿರುಸಿನ ಸುತ್ತಾಟ ನಡೆಸಿದರು. ಆರ್‌ಟಿ ನಗರದ ನಿವಾಸದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಪಕ್ಷದ ಸಂಘಟನೆ, ಬೆಳಗಾವಿ ಅಧಿವೇಶನದಲ್ಲಿ ಮುಂದಿನ ನಡೆ ಬಗ್ಗೆ ಔಪಚಾರಿಕವಾಗಿ ಚರ್ಚಿಸಿದರು.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾದ ನಂತರ ಪಕ್ಷದ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷರ ಕೊಠಡಿಯಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದರು.